ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು, ಈ ನಿಮಿತ್ತ ಸೈರಾ ಚಿತ್ರತಂಡ ಭಾನುವಾರ ಬೆಂಗಳೂರಿನಲ್ಲಿ ಪೂರ್ವಭಾವಿ ಪ್ರಚಾರ ಕಾರ್ಯಕ್ರಮ ನಡೆಸಿತು.
ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ, ನಿರ್ಮಾಪಕ ರಾಮ್ ಚರಣ್ ತೇಜ , ನಾಯಕಿ ತಮನ್ನಾ ಭಾಟಿಯ, ನಿರ್ದೇಶಕ ಸುರೇಂದರ್ ರೆಡ್ಡಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಭಾಗಿಯಾಗಿ ಕಾರ್ಯಕ್ರಮದ ಮೆರುಗು ತಂದರು. ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಕಿಚ್ಚ ಸುದೀಪ್, ಪೋಲೆಂಡ್ನಿಂದಲೇ ವಿಡಿಯೋ ಕಾಲ್ ಮಾಡಿ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಅವರನ್ನು, 'ನಮ್ಮ ಮನೆಗೆ ಬಂದಿರುವುದಕ್ಕೆ ಸ್ವಾಗತ' ಎಂದು ಆತ್ಮೀಯವಾಗಿ ಸ್ವಾಗತಿಸಿ ಶಿವರಾಜ್ ಕುಮಾರ್ ಅವರಿಗೂ ಧನ್ಯವಾದ ಹೇಳಿದರು.
ಬಳಿಕ ಶಿವಣ್ಣ ಮಾತನಾಡಿ, ಮೆಗಾಸ್ಟಾರ್ ಚಿರಂಜೀವಿ ನಮ್ಮ ಅಣ್ಣನ ಸಮಾನ. ಚಿಕ್ಕಂದಿನಿಂದ ಚಿರಂಜೀವಿ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಗಾಂಧಿ ಜಯಂತಿಯಂದು ಸೈರಾ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ. ನಮ್ಮ ಕುಟುಂಬಕ್ಕೂ, ಚಿರಂಜೀವಿ ಅವರ ಕುಟುಂಬಕ್ಕೂ ಆತ್ಮೀಯವಾದ ಸಂಬಂಧವಿದೆ. ಇದು ನಮ್ಮ ಕುಟುಂಬದ ಕಾರ್ಯಕ್ರಮ. ಅಪ್ಪಾಜಿ ಅವರು ಚಿರಂಜೀವಿ ಅವರನ್ನು ತಮ್ಮ ದೊಡ್ಡ ಮಗ ಎಂದು ಹೇಳುತ್ತಿದ್ದರು. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ನೋಡುತ್ತೇನೆ ಎಂದು ಹೇಳಿದರು.
'ನನ್ನ ಪ್ರೀತಿಯ ಕನ್ನಡ ಸಹೋದರ, ಸಹೋದರಿಯರಿಗೆ ನಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಾ. ನಾನು ಚೆನ್ನಾಗಿದ್ದೀನೆ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಚಿರಂಜೀವಿ, ಡಾ.ರಾಜ್ ಕುಮಾರ್ ನನ್ನ ತಂದೆ ಸಮಾನರು. ಶಿವಣ್ಣ ಸಹೋದರ ಸಮಾನರು ಎನ್ನುತ್ತಾ ಅಣ್ಣಾವ್ರ ಕುಟುಂಬಸ್ಥರಿಗೆ ಧನ್ಯವಾದ ಹೇಳಿದರು
ನನ್ನ ಮಗ ರಾಮ್ ಚರಣ್ ನಿರ್ಮಾಪಕತ್ವದಲ್ಲಿ ಮೂಡಿ ಬಂದಿರುವ ದೊಡ್ಡ ಬಜೆಟ್ ಸಿನಿಮಾ ಇದಾಗಿದೆ. ವೃತ್ತಿ ಬದುಕಿನಲ್ಲಿ ಸ್ವಾತಂತ್ರ್ಯ ಸೇನಾನಿಯ ಪಾತ್ರ ಮಾಡುವ ಆಸೆ ಇತ್ತು. ಭಗತ್ ಸಿಂಗ್ ಪಾತ್ರ ಮಾಡುವ ಆಸೆಯೂ ಮೊಳೆತಿತ್ತು. ನರಸಿಂಹ ರೆಡ್ಡಿಯ ಚರಿತ್ರೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರೂ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟದ ಸೇನಾನಿ. ಅವರ ಪಾತ್ರ ತೆರೆಯ ಮೇಲೆ ಬರುತ್ತಿರುವುದು ಹೆಮ್ಮೆಯ ವಿಚಾರ. ನನ್ನ ಆಸೆಯನ್ನು ಪೂರೈಸುವುದಕ್ಕೆ ಚರಣ್, ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿದ್ದಾರೆ. ತಂದೆ ಮಗನ ಆಸೆ ಪೂರೈಸುವುದಕ್ಕೆ ಶ್ರಮಿಸಿದ್ದಾನೆ. ರಾಮ್ ಚರಣ್ ಅಂತಹ ಮಗನನ್ನ ಪಡೆದಿದ್ದಕ್ಕೆ ನಿಜಕ್ಕೂ ಹೆಮ್ಮೆಯಿದೆ. ಸಿನಿಮಾಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದವರಿಗೂ, ಕೆಸಲ ಮಾಡಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಶಿವಣ್ಣ ಹೇಳಿದಂತೆ ಕನ್ನಡ, ತೆಲುಗು, ತಮಿಳು ಅನ್ನೋ ಭಾಷೆಯ ಭೇದ ಇಲ್ಲದೆ ಸಿನಿಮಾ ನೋಡಬೇಕು. ಇದು ಕೇವಲ ತೆಲುಗು ಸಿನಿಮಾವಲ್ಲ, ಭಾರತೀಯರೆಲ್ಲಾ ಹೆಮ್ಮೆ ಪಡುವಂತಹ ಹೋರಾಟಗಾರನ ಕಥೆ. 'ಸೈರಾವನರಸಿಂಹ ರೆಡ್ಡಿ' ಭಾರತೀಯ ಸಿನಿಮಾ ಧಯವಿಟ್ಟು ಎಲ್ಲರೂ ಸಿನಿಮಾ ನೋಡಿ ಹರಸಿ ಎಂದು ಚಿರಂಜೀವಿ ಮನವಿ ಮಾಡಿದರು.