ದಕ್ಷಿಣ ಭಾರತೀಯ ಚಿತ್ರ ರಂಗದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ಡೈಲಾಗ್ ಕಿಂಗ್ ಸಾಯಿಕುಮಾರ್ ‘ರಂಗಿ ತರಂಗ’ ಸಿನಿಮಾದ ನಂತರ ವಿಭಿನ್ನ ಪಾತ್ರಗಳನ್ನು ಕನ್ನಡದಲ್ಲಿ ಒಪ್ಪಿಕೊಳ್ಳಲು ಶುರು ಮಾಡಿದವರು.
ಜನ್ಮ ಕೊಟ್ಟ ಭಾಷೆ ತೆಲುಗು, ಜೀವನ ಕೊಟ್ಟ ಭಾಷೆ ಕನ್ನಡ ಎಂದು ಯಾವಾಗಲೂ ಹೇಳಿಕೊಳ್ಳುವ ಸಾಯಿಕುಮಾರ್ ಕಳೆದ ವರ್ಷ ಇನ್ನಿಬ್ಬರು ಸಹೋದರರಾದ ರವಿಶಂಕರ್ ಹಾಗೂ ಅಯ್ಯಪ ಶರ್ಮ ಜೊತೆ ಸೇರಿ ಕನ್ನಡ ಚಿತ್ರ ‘ಭರಾಟೆ’ಯಲ್ಲಿ ಗುಡುಗಿದ್ದರು.
ವಿಲನ್ ಪಾತ್ರದ ಮೂಲಕ ಚಿತ್ರರಂಗದಲ್ಲಿ ವೃತ್ತಿಜೀವನ ಆರಂಭ ಮಾಡಿದ ಸಾಯಿಕುಮಾರ್ ‘ಪೊಲೀಸ್ ಸ್ಟೋರಿ’ ಸಿಸಿಮಾ ಮಾಲಕ ತಮ್ಮ ವರ್ಚಸ್ಸು ಬದಲಿಸಿಕೊಂಡರು. ಅನೇಕ ಸಿನಿಮಾಗಳಲ್ಲಿ ನಾಯಕರಾದರು. ಈಗ ಮತ್ತೆ ಪೂರ್ಣ ಪ್ರಮಾಣದ ಖಡಕ್ ವಿಲನ್ ಪಾತ್ರಕ್ಕೆ ಸಜ್ಜಾಗಿದ್ದಾರೆ.
ವಿದೇಶದಲ್ಲೂ ಗಮನ ಸೆಳದ ‘ಕೆ ಜಿ ಎಫ್’ ಚಿತ್ರಕ್ಕೆ ಸಂಭಾಷಣೆ ಬರೆದ ಚಂದ್ರಮೌಳಿ ‘ದಿಲ್ಮಾರ್’ ಕನ್ನಡ ಸಿನಿಮಾ ಮೂಲಕ ನಿರ್ದೇಶಕ ಪಟ್ಟ ಅಲಂಕರಿಸಲಿದ್ದಾರೆ. ರಾಮ್ ಹಾಗೂ ಅದಿತಿ ಪ್ರಭುದೇವ ಜೊತೆ ಡಿಂಪಲ್ ಯಹಾಟಿ ಸಹ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇದೆ ಚಿತ್ರಕ್ಕೆ ಸಾಯಿಕುಮಾರ್ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಬರಹಗಾರ ಚಂದ್ರಮೌಳಿ ಅವರ ತಲೆಯಲ್ಲಿ ಖಳನಟನ ಪಾತ್ರ ಬರೆಯುವಾಗಲೇ ಸಾಯಿಕುಮಾರ್ ಇದ್ದರಂತೆ. ಸಾಯಿ ಕುಮಾರ್ ಅವರಿಗೆ ‘ದಿಲ್ಮಾರ್’ ಚಿತ್ರದಲ್ಲಿ ವಿಶೇಷ ಸಂಭಾಷಣೆ ಸಹ ಇರಲಿದೆ ಎಂದು ನಿರ್ದೇಶಕರು ಹೇಳುತ್ತಾರೆ.
ಲಾಕ್ ಡೌನ್ ಮುಗಿದ ನಂತರ ‘ದಿಲ್ಮಾರ್’ ಚಿತ್ರದ ಪ್ರಚಾರದ ಕೆಲಸ ಶುರುವಾಗಲಿದ್ದು, ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಿಡುಗಡೆಯ ಚಿಂತನೆ ಇದೆ.