ಹೈದರಾಬಾದ್ (ತೆಲಂಗಾಣ): ಭೀಕರ ರಸ್ತೆ ಅಪಘಾತಕ್ಕೊಳಗಾಗಿ ಹೈದರಾಬಾದ್ನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿರುವ ಟಾಲಿವುಡ್ ನಟ ಸಾಯಿ ಧರಂ ತೇಜ್ ಅವರಿಗೆ ಯಶಸ್ವಿಯಾಗಿ ಕಾಲರ್ ಬೋನ್ ಸರ್ಜರಿ (ಭುಜದ ಮೂಳೆಯ ಶಸ್ತ್ರಚಿಕಿತ್ಸೆ) ಮಾಡಲಾಗಿದೆ.
ಸಾಯಿ ತೇಜ್ರ ಆರೋಗ್ಯ ಸ್ಥಿತಿ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಆಸ್ಪತ್ರೆ, ಕಾಲರ್ ಬೋನ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅವರ ಆರೋಗ್ಯವು ಕ್ರಮೇಣ ಸುಧಾರಿಸುತ್ತಿದೆ. ವೈದ್ಯರು ಸಾಯಿ ತೇಜ್ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ ಎಂದು ತಿಳಿಸಿದೆ.
ಸೆ.10ರ ರಾತ್ರಿ ದುರ್ಗಂ ಚೇರವು ಕೇಬಲ್ ಬ್ರಿಡ್ಜ್ ಮೇಲೆ ಸ್ಪೋರ್ಟ್ಸ್ ಬೈಕ್ನಲ್ಲಿ ಬರುತ್ತಿದ್ದ ಸಾಯಿ ಧರಂ ತೇಜ್, ಬೈಕ್ ಸ್ಕಿಡ್ ಆಗಿ ಬಿದ್ದಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೈದರಾಬಾದ್ನ ಜ್ಯುಬಿಲಿ ಹಿಲ್ಸ್‌ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಅಜಾಗರೂಕತೆ, ರ‍್ಯಾಶ್ ಡ್ರೈವಿಂಗ್; ಟಾಲಿವುಡ್ ನಟ ಸಾಯಿ ಧರಂತೇಜ್ ವಿರುದ್ಧ ಕೇಸ್ ದಾಖಲು
ಇನ್ನು ಬೈಕ್ ಅಪಘಾತ ಸಂಬಂಧ ಅಜಾಗರೂಕತೆ ಹಾಗೂ ರ‍್ಯಾಶ್ ಡ್ರೈವಿಂಗ್ ಆರೋಪದಡಿ ಸಾಯಿ ಧರಂ ತೇಜ್ ವಿರುದ್ಧ ರಾಯ್‌ದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಯಿ ಧರಂ ತೇಜ್ ಇವರು ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ಹಾಗೂ ನಟ ವರುಣ್ ತೇಜ್ ಅವರ ಸಹೋದರನಾಗಿದ್ದಾರೆ. ಹತ್ತಾರು ಸಿನಿಮಾಗಳಲ್ಲಿ ನಟಿಸಿರುವ ಸಾಯಿ ತೇಜ್, 2019ರಲ್ಲಿ ತೆರೆಕಂಡ 'ಚಿತ್ರಲಹರಿ' ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದರು. ತಮ್ಮ ಮುಂದಿನ ಚಿತ್ರ 'ರಿಪಬ್ಲಿಕ್' ನಲ್ಲಿ ಸಾಯಿ ಅವರು ಐಎಎಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ರಿಪಬ್ಲಿಕ್ - ಇದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಕರ್ನಾಟಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಜೀವನ ಕಥೆಗಳನ್ನು ಆಯ್ದು ನಿರ್ಮಾಣವಾಗುತ್ತಿರುವ ತೆಲುಗು ಚಿತ್ರವಾಗಿದೆ.