ಹೈದರಾಬಾದ್: ಮೂರನೇ ಅಲೆ ಕೊರೊನಾ ಆರ್ಭಟ ಜೋರಾಗಿದೆ. ಪ್ರತಿದಿನ ಲಕ್ಷಾಂತರ ಹೊಸ ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗುತ್ತಿವೆ. ಪ್ರಮುಖವಾಗಿ ವಿವಿಧ ಭಾಷೆಯ ನಟ-ನಟಿಯರಲ್ಲಿ ಮಹಾಮಾರಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಕುಬ್ರಾ ಸೇಠ್ ಮತ್ತು ಮಿಥಿಲಾ ಪಾಲ್ಕರ್ಗೂ ಸೋಂಕು ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಕುಬ್ರಾ ಸೇಟ್, ಲಕ್ಷಣರಹಿತ ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇದರ ಜೊತೆಗೆ, ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದಿಕಿ ನಟಿಸಿರುವ ವೆಬ್ ಸಿರೀಸ್ ‘ಸೇಕ್ರೆಡ್ ಗೇಮ್ಸ್’ನಲ್ಲಿ ಅಭಿನಯಿಸಿರುವ ಕುಬ್ರಾ ಮೂಲತಃ ಬೆಂಗಳೂರಿನವರು.
ಲಿಟಲ್ ಥಿಂಗ್ಸ್ ಖ್ಯಾತಿಯ ಮಿಥಿಲಾ ಪಾಲ್ಕರ್ ಅವರಿಗೂ ಕೊರೊನಾ ಸೋಂಕು ದೃಢಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ವಾರವನ್ನು ಕೋವಿಡ್ ಸೋಂಕಿನೊಂದಿಗೆ ಪ್ರಾರಂಭಿಸಿದ್ದೇನೆ. ಕೋವಿಡ್ನ ಕೆಲ ಲಕ್ಷಣ ಕಾಣಿಸಿಕೊಂಡಿರುವ ಕಾರಣ ಪ್ರತ್ಯೇಕಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಸಂಪರ್ಕಕ್ಕೆ ಬಂದಿರುವ ಎಲ್ಲರೂ ಪರೀಕ್ಷೆಗೊಳಪಡುವಂತೆ ನಟಿ ಮನವಿ ಮಾಡಿದ್ದಾರೆ.