ಪಾರು ಧಾರಾವಾಹಿಯ ಮೋಕ್ಷಿತಾ ಪೈ, ಜೊತೆ ಜೊತೆಯಲಿ ಧಾರಾವಾಹಿಯ ಮೇಘಾ ಶೆಟ್ಟಿ ಸೇರಿ ಪ್ರಸ್ತುತ ಪ್ರಸಾರವಾಗುತ್ತಿರುವ ಧಾರಾವಾಹಿಗಳ ನಾಯಕಿಯರು ಸಿನಿಮಾಗಳಲ್ಲಿ ಕೂಡಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿ ನಟಿ ನಿಶಾ ರವಿಕೃಷ್ಣನ್ ಕೂಡಾ ಬೆಳ್ಳಿತೆರೆಗೆ ಪ್ರಮೋಷನ್ ಪಡೆದಿದ್ದಾರೆ.
ಇದನ್ನೂ ಓದಿ: ನೋಡಲು ಐಶ್ವರ್ಯ ಅವರಂತೇ ಇದ್ದೇನೆ, ಆದರೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ...ಆಮ್ನಾ ಸ್ಪಷ್ಟನೆ
ರೌಡಿ ಬೇಬಿ ಆಗಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ನಿಶಾ ರವಿ ಕೃಷ್ಣನ್ ಇದೀಗ ವಿನಯ್ ರಾಜ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ 'ಅದೊಂದಿತ್ತು ಕಾಲ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ ನಿಶಾ ರವಿಕೃಷ್ಣನ್. "ಇದೇ ಮೊದಲ ಬಾರಿ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದೇನೆ. ವಿನಯ್ ರಾಜ್ ಕುಮಾರ್ ಅವರ ಜೊತೆ ಅಭಿನಯಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಇಂತಹ ಸುವರ್ಣಾವಕಾಶ ನೀಡಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದ" ಎಂದು ನಿಶಾ ಹೇಳಿಕೊಂಡಿದ್ದಾರೆ. ಮೂರು ಕಾಲಘಟ್ಟದಲ್ಲಿ ಈ ಸಿನಿಮಾ ನಡೆಯಲಿದ್ದು ಇದರಲ್ಲಿ ಬಾಲ್ಯದ ತುಂಟತನದ ಜೊತೆಗೆ ಯೌವ್ವನದ ಸೆಳೆತವನ್ನು ವಿವರಿಸಲಾಗಿದೆ. ಇದರಲ್ಲಿ ಶಾಲಾ ಹುಡುಗಿಯಾಗಿ ನಿಶಾ ಅಭಿನಯಿಸಲಿದ್ದಾರೆ. "ಅದೊಂದಿತ್ತು ಕಾಲ' ಚಿತ್ರದಲ್ಲಿ ನಾನು 90 ರ ಕಾಲಘಟ್ಟದ ಹುಡುಗಿಯಾಗಿ ನಟಿಸಲಿದ್ದೇನೆ. ಚಿತ್ರಕಥೆ ಬಹಳ ವಿಭಿನ್ನ ಎನಿಸಿದ ಕಾರಣ ನಾನು ಈ ಸಿನಿಮಾ ಒಪ್ಪಿಕೊಂಡೆ" ಎಂದು ನಿಶಾ ಹೇಳಿದ್ದಾರೆ.