ಕೊರೊನಾ ಲಾಕ್‍ಡೌನ್ ಮುಗಿದು ಚಿತ್ರ ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆ , ದರ್ಶನ್ ಅಭಿನಯದ 'ರಾಬರ್ಟ್' ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಲಾಕ್‍ಡೌನ್ ಮುಗಿದು, ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಿ ಒಂದೂವರೆ ತಿಂಗಳಾದರೂ ಸಿನಿಮಾ ಬಿಡುಗಡೆಯಾಗಿಲ್ಲ, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯೂ ಕಾಣುತ್ತಿಲ್ಲ.
ಮೊದಲು ಕ್ರಿಸ್ಮಸ್ ವೇಳೆಗೆ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಲಾಗಿತ್ತು. ಆ ನಂತರ ಸಂಕ್ರಾಂತಿ, ಇದೀಗ ಯುಗಾದಿ ವೇಳೆಗೆ ಚಿತ್ರ ಬಿಡುಗಡೆಯಾದರೆ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳುವ ಮಾತುಗಳನ್ನು ಕೇಳಿದರೆ, ಬಹುಶಃ ಸಿನಿಮಾ ಯುಗಾದಿ ವೇಳೆಗೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರ ಇನ್ನಷ್ಟು ವಿಳಂಬವಾದರೂ ಅದರಲ್ಲಿ ಆಶ್ಚರ್ಯವಿಲ್ಲ. ಅದಕ್ಕೆ ಕಾರಣ, ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ಚಿತ್ರ ಬಿಡುಗಡೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದೆಯಾದರೂ, ಕೇವಲ ಶೇಕಡಾ 50 ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಈ ನಿಯಮದಿಂದಾಗಿ ಅರ್ಧ ಚಿತ್ರಮಂದಿರಕ್ಕೆ ಚಿತ್ರ ಪ್ರದರ್ಶನ ಮಾಡುವಂತಾಗಿದೆ. ಎಲ್ಲಾ ಆಸನಗಳು ತುಂಬಿದ್ದರೂ ನಿರ್ಮಾಪಕರ ಹಣ ಬರುವುದು ಕಷ್ಟವಿರುವಾಗ, ಅರ್ಧ ಚಿತ್ರಮಂದಿಗಳಿಗೆ ಬಿಡುಗಡೆ ಮಾಡಿದರೆ ಕಷ್ಟ ಎಂಬ ಅಭಿಪ್ರಾಯ ಕೋಟಿ ಕೋಟಿ ಬಂಡವಾಳ ಹೂಡಿ ಚಿತ್ರ ನಿರ್ಮಿಸಿರುವ ನಿರ್ಮಾಪಕರದ್ದು. ಅದೇ ಕಾರಣಕ್ಕೆ ಅವರೆಲ್ಲಾ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಭರ್ತಿಗೆ ಅವಕಾಶ ಕಲ್ಪಿಸುವವರೆಗೂ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಸಹ ಇದೇ ತಂತ್ರವನ್ನು ಅನುಸರಿಸುತ್ತಿದ್ದು, ಶೇಕಡಾ 100ರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ, ನೋಡಿಕೊಂಡು ಸಿನಿಮಾ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರ ಇದಕ್ಕೆ ಯಾವಾಗ ಅನುಮತಿ ನೀಡಲಿದೆ ಕಾದು ನೋಡಬೇಕು.