ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಭರ್ಜರಿ ಯಶಸ್ಸು ಕಾಣುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. 'ರಾಬರ್ಟ್' ಸಿನಿಮಾ ಸ್ಯಾಂಡಲ್ವುಡ್ನ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 100 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ದಚ್ಚು ಬಾಕ್ಸ್ ಆಫೀಸ್ನ ಸುಲ್ತಾನ ಎಂಬ ಮಾತನ್ನು ಮತ್ತೆ ನಿಜವಾಗಿದೆ.
ಇದನ್ನೂ ಓದಿ : ಸ್ಯಾಂಡಲ್‌ವುಡ್ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ 'ರಾಬರ್ಟ್'...!
ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ 'ರಾಬರ್ಟ್' ಸಿನಿಮಾ ಮೊದಲ ದಿನವೇ 17.24 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ರೂಪಾಯಿ ಹಣವನ್ನು ಗಳಿಸಿತ್ತು.
ಒಂದು ವಾರದ ಬಳಿಕವೂ 'ರಾಬರ್ಟ್'ನ ನಾಗಾಲೋಟ ಮುಂದುವರಿದಿತ್ತು. 8 ದಿನಗಳಲ್ಲಿ ಈ ಚಿತ್ರ 78.36 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು. ಈಗ ಅಂದುಕೊಂಡಂತೆ ಬಿಡುಗಡೆಯಾಗಿ 20 ದಿನಗಳಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು 100 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ದಾಖಲೆ ಬರೆದಿದೆ.
100 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ:
'ರಾಬರ್ಟ್' 100 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಇದಾಗಿದೆ ಎಂದು ಸ್ವತಃ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅನೌನ್ಸ್ ಮಾಡಿದ್ದಾರೆ. ಇನ್ನು 2018ರಲ್ಲಿ ತೆರೆಕಂಡ 'ಕೆಜಿಎಫ್' ಸಿನಿಮಾ ಕೇವಲ 7 ದಿನಕ್ಕೆ 100 ಕೋಟಿ ರೂ. ಗಳಿಸಿತ್ತು ಎಂದು ವರದಿ ಆಗಿತ್ತು. ಆದರೆ, ಆ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೂ ಡಬ್ ಆಗಿದ್ದರಿಂದ ಅಷ್ಟು ಪ್ರಮಾಣದ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ : ಸಿನಿಮಾ ಚೆನ್ನಾಗಿದ್ರೆ, ಪೈರಸಿ ಆದ್ರೂ ಜನರು ಚಿತ್ರಮಂದಿರಗಳಿಗೆ ಹೋಗಿ ನೋಡ್ತಾರೆ: ದರ್ಶನ್
ರಾಬರ್ಟ್ ಕೇವಲ ಕನ್ನಡದಲ್ಲೇ 100 ಕೋಟಿ ರೂ. ಗಳಿಸುವ ಮೂಲಕ ತನ್ನದೇ ಹಾದಿಯಲ್ಲಿ ರೆಕಾರ್ಡ್ ಮಾಡಿದೆ ಅಂತಾ ಹೇಳಲಾಗುತ್ತಿದೆ. ಇನ್ನು ರಾಬರ್ಟ್‌ಗೆ ಈ ಪರಿ ಯಶಸ್ಸು ಸಿಗುವುದಕ್ಕೆ ಕಾರಣವಾದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಸಲುವಾಗಿ ರಾಜ್ಯಾದ್ಯಂತ ವಿಜಯ ಯಾತ್ರೆ ಮಾಡಬೇಕು ಎಂದು ದರ್ಶನ್ ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಕೋವಿಡ್-19 ಎರಡನೇ ಅಲೆ ಹರಡುವ ಭೀತಿಯಿಂದಾಗಿ ಸದ್ಯಕ್ಕೆ ವಿಜಯಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಅನ್ಯಮಾರ್ಗವಿಲ್ಲದೇ ದರ್ಶನ್ ಸೋಶಿಯಲ್ ಮೀಡಿಯಾ ಮೂಲಕವೇ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.