ನಿನ್ನ ಯಾವುದೇ ಅತಿಯಾದ ಬುದ್ಧಿವಂತಿಕೆಯಾಗಲಿ ಅಥವಾ ಅಹಂ ಆಗಲಿ ಎಲ್ಲಿಯೂ ತೋರಿಸಿಕೊಳ್ಳಬೇಡ. ಹೇಳಿದಷ್ಟು ಆ್ಯಕ್ಟ್ ಮಾಡು ಎಂದು ನನಗೆ ನಾನೇ ಹೇಳಿಕೊಂಡು ನಿರ್ದೇಶಕ ಪಿ ವಾಸು ಅವರ ಬಳಿ ಬಂದಿದ್ದೆ ಎಂದು ಮೊದಲ ಬಾರಿ ಅವರನ್ನು ಭೇಟಿ ಮಾಡಿದ ಪ್ರಸಂಗವನ್ನು ನಟ ರವಿಚಂದ್ರನ್ ನೆನಪು ಮಾಡಿಕೊಂಡರು.
‘ದೃಶ್ಯ 2’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಾಕ್ರಮದಲ್ಲಿ ಪಿ ವಾಸು ಮತ್ತು ತಮ್ಮ ನಡುವಿನ ಸಂಬಂಧ ಹೇಗಿದೆ ಅನ್ನೋದರ ಬಗ್ಗೆ ವಿಸ್ತಾರವಾಗಿ ಮಾತನಾಡಿದ ಕ್ರೇಜಿಸ್ಟಾರ್, ದೃಶ್ಯ ನನ್ನ ಜೀವನವನ್ನು ಬದಲಾಯಿಸಿದ ಸಿನಿಮಾ. ಅದಕ್ಕೆ ಮೂಲ ಕಾರಣ ನಿರ್ದೇಶಕ ಪಿ ವಾಸು. ದೃಶ್ಯ ಮೊದಲ ಭಾಗದ ಯಶಸ್ಸಿಗೆ ನಮ್ಮಿಬ್ಬರ ಕೆಮಿಸ್ಟ್ರಿಯೇ ಕಾರಣ. ಭಾಗ ಎರಡು ಸಹ ಹಾಗೆಯೇ ಇದೆ. ಚಿತ್ರದ ಯಶಸ್ಸಿನ ಬಗ್ಗೆ ಯಾವುದೇ ಅನುಮಾನ ಬೇಡ. ‘ದೃಶ್ಯ 2’ ನಿಮ್ಮನ್ನು ಕೇಂದ್ರೀಕರಿಸಲಿದೆ ಎಂದು ಸಿನಿಮಾದಲ್ಲಿನ ನೈಜ ಪಾತ್ರ ಹಾಗೂ ಚಿತ್ರ ತಂಡದ ಬಗ್ಗೆ ವಿವರಣೆ ನೀಡಿದರು.
ಸುದೀಪ್ ಸೇರಿದಂತೆ ನಾವು ಏಳು ಜನ. ಇದು ನಮ್ಮ ಚಿಕ್ಕ ಕುಟುಂಬ. ಅದು ಬಿಟ್ಟರೆ ಸಿನಿಮಾ ಪ್ರಪಂಚ ನಮ್ಮ ದೊಡ್ಡ ಕುಟುಂಬ. ಎಲ್ಲೆಲ್ಲಿ ನಮ್ಮನ್ನು ಪ್ರೀತಿಸುವವರು ಇದ್ದಾರೋ ಅವರೆಲ್ಲರೂ ನಮ್ಮ ಕುಟುಂಬದವರೇ. ಅದು ಬಿಟ್ಟರೆ ರಾಜೇಂದ್ರ ಪೊನ್ನಪ್ಪ ಅನ್ನೋ ಚಿಕ್ಕ ಕುಟುಂಬ. ಎಲ್ಲಾ ಸಿನಿಮಾದಲ್ಲಿ ವಿಲನ್ಗಳನ್ನು ಒದ್ದು ಹೀರೋ ಆಗ್ತಾನೆ. ಆದರೆ, ಇಲ್ಲಿ ವಿಲನ್ಗಳಿಂದ ಒದಿಸಿಕೊಂಡು ಹೀರೋ ಆಗ್ತಾನೆ.
ತನ್ನ ಕುಟುಂಬಕ್ಕಾಗಿ ಈ ರಾಜೇಂದ್ರ ಪೊನ್ನಪ್ಪ ಅನ್ನೋ ಹೀರೋ ಏನೂ ಬೇಕಾದರೂ ಮಾಡಲು ಸಿದ್ಧ. ಇದೊಂದು ಚಿಕ್ಕ ಪ್ರೇಮ ಲೋಕ. ಇದನ್ನು ಕಾಪಾಡಲು ಒಬ್ಬ ತಂದೆ ಅಥವಾ ಸಾಮಾನ್ಯ ಮನುಷ್ಯ ಎಂತಹ ಇಂಟಲಿಜೆನ್ಸ್ ಆಗಬಹುದು ಅನ್ನೋದನ್ನು ತೋರಿಸಿಕೊಡುತ್ತದೆ. ಹಾಗಾಗಿ ಈ ಚಿತ್ರ ಎಲ್ಲ ಕುಟುಂಬದವರಿಗೂ ಇಷ್ಟವಾಗುತ್ತದೆ ಎಂದರು.
ಒಂದು ಸಾಮಾನ್ಯ ಕುಟುಂಬದಲ್ಲಿ ಓರ್ವ ತಂದೆ ಆದರ್ಶ ವ್ಯಕ್ತಿ. ಫಾದರ್ ಈಜ್ ಎ ಸೂಪರ್ ಹೀರೋ ಅನ್ನೋ ಹಾಗೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಹಾಗೆಂದ ಮಾತ್ರಕ್ಕೆ ತಂದೆಯಲ್ಲಿ ಭಯ ಇರುವುದಿಲ್ಲ ಅನ್ನೋಕೆ ಆಗಲ್ಲ. ಮಕ್ಕಳು ಧೈರ್ಯ ಕಳೆದುಕೊಳ್ಳಬಾರದು. ಅವರ ಮುಂದೆ ಯಾವಾಗಲೂ ಅವನು ಸೂಪರ್ ಹೀರೋ. ಇದನ್ನು ದೃಶ್ಯ 2ರಲ್ಲಿ ಅಂದವಾಗಿ ಹೆಣೆಯಲಾಗಿದೆ ಎಂದು ರವಿಮಾಮ ವಿವರಿಸಿದರು.