'ಡೆಡ್ಲಿ ಸೋಮ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ರವಿ ಶ್ರೀವತ್ಸ, ನಂತರ ಗಂಡ ಹೆಂಡತಿ, ಬಾಯ್ ಫ್ರೆಂಡ್, ಮಾದೇಶ, ದಶಮುಖ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದವರು. ಬಹಳ ದಿನಗಳ ನಂತರ ಇದೀಗ ರವಿ ಶ್ರೀವತ್ಸ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.
ರವಿ ಶ್ರೀವತ್ಸ ಮತ್ತೆ ಭೂಗತ ಲೋಕದ ವ್ಯಕ್ತಿಯೊಬ್ಬರ ಬಯೋಪಿಕ್ ಮಾಡುತ್ತಿದ್ದಾರೆ. ಡೆಡ್ಲಿ ಸೋಮ, ಬಾಬಾ ಚಿತ್ರಗಳನ್ನು ನಿರ್ಮಿಸಿದ್ದ ಶೋಭಾ ರಾಜಣ್ಣ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಶೋಭಾ ರಾಜಣ್ಣ ಪುತ್ರ ಕಾರ್ತಿಕ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 'ಬಾಬಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಾರ್ತಿಕ್ ನಂತರ 'ಸಕ್ಕತ್ತಾಗವ್ನೆ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. 'ಟೈಗರ್' ಚಿತ್ರದಲ್ಲಿ ಕೂಡಾ ಪಾತ್ರ ಮಾಡಿದ್ದರು. ಈಗ ರವಿ ಶ್ರೀವತ್ಸ ಅವರ ಚಿತ್ರದಲ್ಲಿ ಮತ್ತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್ ತಮ್ಮ ಹೆಸರನ್ನು ದೀಕ್ಷಿತ್ ಎಂದು ಬದಲಿಸಿಕೊಂಡಿದ್ದಾರೆ.
ಡಿಸೆಂಬರ್ನಲ್ಲಿ ರವಿ ಶ್ರೀವತ್ಸ ಈ ಸಿನಿಮಾವನ್ನು ಆರಂಭಿಸಲಿದ್ದಾರೆ. ಈ ಚಿತ್ರ ಯಾರ ಬಯೋಪಿಕ್ ಎಂಬ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಮೂರು ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡುತ್ತಿರುವುದಕ್ಕೆ ರವಿ ಶ್ರೀವತ್ಸ ಸಂತೋಷ ವ್ಯಕ್ತಪಡಿಸಿದ್ದಾರೆ. ಟೈಗರ್ ಚಿತ್ರದಲ್ಲಿ ಮಾಡಿದ್ದ ತಪ್ಪನ್ನು ಮುಂದಿನ ಚಿತ್ರಗಳಲ್ಲಿ ಮಾಡಬಾರದು ಎಂಬ ಕಾರಣಕ್ಕೆ ಹೊಸ ಅಂಶಗಳನ್ನು ಅಳವಡಿಸಿಕೊಂಡು ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ರವಿ ಶ್ರೀವತ್ಸ ಸಿನಿಮಾ ಮಾಡುತ್ತಿದ್ದಾರೆ ಎಂದರೆ ಅವರು ಕಥೆ ಬಗ್ಗೆ ದೊಡ್ಡ ಮಟ್ಟಿಗೆ ಅಧ್ಯಯನ ಮಾಡಿರುತ್ತಾರೆ. ಈ ಚಿತ್ರ ಹೇಗಿರಲಿದೆ ಎಂಬುದನ್ನು ನೋಡಲು ಕೇಲವು ದಿನಗಳು ಕಾಯಲೇಬೇಕು.