ಕರ್ನಾಟಕ ರಾಜ್ಯ ಕಂಡ ದಕ್ಷ ಅಧಿಕಾರಿಗಳಲ್ಲಿ ರವಿ ಡಿ. ಚನ್ನಣ್ಣನವರ್ ಕೂಡ ಒಬ್ಬರು. ಪೊಲೀಸ್ ಸೇವೆ ಜೊತೆಗೆ ಸಮಾಜ ಮುಖಿ ಕೆಲಸ ಹಾಗೂ ಸ್ಫೂರ್ತಿದಾಯಕ ಭಾಷಣಗಳಿಂದಲೇ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಎಷ್ಟೋ ಯುವಕರಿಗೆ ಪೊಲೀಸ್ ಇಲಾಖೆ ಸೇರಬೇಕೆಂಬ ಕಿಚ್ಚು ಹಬ್ಬಿಸಿದ್ದಾರೆ. ಇಂತಹ ದಕ್ಷ ಅಧಿಕಾರಿ ಒಂದು ಕಾಲದಲ್ಲಿ ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದರಂತೆ. ಹೀಗಂತಾ, ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ಕಾಯ್ಡು ಮತ್ತು ಮೇಘಾ ಶೆಟ್ಟಿ ಅಭಿನಯಿಸುತ್ತಿರುವ 'ದಿಲ್ ಪಸಂದ್' ಸಿನಿಮಾ ಪತ್ರಿಕಾಗೋಷ್ಠಿ ಸೋಮವಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, 13 ವರ್ಷಗಳ ಸೇವೆಯಲ್ಲಿ ಒಂದು ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿರೋದು ಇದೇ ಮೊದಲು ಎಂದರು.
ಡಾ. ರಾಜ್ಕುಮಾರ್ ಅವರ 'ಮಯೂರ' ಸಿನಿಮಾ ನೋಡಿ ಸ್ವಾಭಿಮಾನದ ಪಾಠ ಕಲಿತಿರುವೆ ಎಂದರು. ಹಾಗೆಯೇ, ಎಲ್ಲೂ ಹೇಳಿಲ್ಲದ ಒಂದು ಸತ್ಯವನ್ನು ಇಂದು ಹೇಳುತ್ತಿದ್ದೇನೆ. ನಾನು ಗದಗದಲ್ಲಿ ಬ್ಲಾಕ್ ಟಿಕೆಟ್ ಮಾರುತ್ತಿದ್ದೆ. ಮಹಾಲಕ್ಷ್ಮಿ, ಶಾಂತಿ ಚಿತ್ರಮಂದಿಗಳಲ್ಲಿ ಬ್ಲಾಕ್ ಟಿಕೆಟ್ ಮಾರಿದ್ದೆ.
ಅಸುರ ಸಿನಿಮಾ ರಿಲೀಸ್ ಆದಾಗ ನಾನು ಪ್ರಥಮ ಪಿಯುಸಿ ಹುಡುಗ. ಯಜಮಾನ, ದಿಲ್ ಕಾ ರಿಶ್ತಾ, ಅಂಜಲಿ ಗೀತಾಂಜಲಿ ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ತೆಗೆದುಕೊಂಡು ಬರುತ್ತಿದ್ದೆ ಎಂದು ತಿಳಿಸಿದ್ದಾರೆ.
ನಟನೆ, ಬರವಣಿಗೆ, ಸಿನಿಮಾ ಬಗ್ಗೆ ಅವರಿಗೆ ಅಪಾರ ಆಸಕ್ತಿ. ಹಲವು ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಲೇಜು ದಿನಗಳಿಂದಲೂ ಅವರ ಮೇಲೆ ಸಿನಿಮಾಗಳು ಬಹಳ ಪ್ರಭಾವ ಬೀರಿವೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಪತ್ನಿ ಒತ್ತಾಯಕ್ಕೆ ಲವ್ ಮಾಕ್ಟೈಲ್ ಸಿನೆಮಾ ನೋಡಿದೆ
ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಎರಡು ಕಾರಣಗಳಿವೆ. ಒಂದು ನಿರ್ಮಾಪಕ ಸುಮಂತ್ ಕ್ರಾಂತಿ. ಮತ್ತೊಂದು ಕಾರಣ ನಟ ಡಾರ್ಲಿಂಗ್ ಕೃಷ್ಣ ಅವರು. ನಾನು ಅವರ ಲವ್ ಮಾಕ್‌ಟೆಲ್ ಸಿನಿಮಾ ನೋಡಿದೆ. ಅದು ನನ್ನ ಪತ್ನಿಯ ಒತ್ತಾಯದ ಮೇರೆಗೆ. ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಅತ್ಯದ್ಭುತವಾಗಿ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಮನಸ್ಸಿನಿಂದ ಮಾಡಿರುವ ಸಿನಿಮಾ ಅದು. ಚಿತ್ರರಂಗದಲ್ಲಿ ಅವರು ಬೆಳೆದು ಬಂದ ಹಿನ್ನೆಲೆ ಬಗ್ಗೆ ನನಗೆ ಖುಷಿ ಇದೆ. ಚಿತ್ರರಂಗವು ಪ್ರತಿಯೊಬ್ಬರ ಪ್ರತಿಭೆಯನ್ನು ಪ್ರತಿನಿತ್ಯವು ಓರೆಗೆ ಹಚ್ಚುತ್ತದೆ ಎಂದಿದ್ದಾರೆ.
ದಿಲ್ ಪಸಂದ್ ಚಿತ್ರಕ್ಕೆ ರವಿ ಡಿ. ಚನ್ನಣ್ಣನವರ್ ಗೆಳೆಯ ಸುಮಂತ್ ಕ್ರಾಂತಿ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಮಳೆ, ಶಿವಾರ್ಜುನಾ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಶಿವ ತೇಜಸ್ ದಿಲ್ ಪಸಂದ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.
ತಬಲ ನಾಣಿ, ಸಾಧುಕೋಕಿಲ ಮುಂತಾದ ಖ್ಯಾತ ನಟರು ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಛಾಯಾಗ್ರಹಣವಿದೆ. ಸದ್ಯದಲ್ಲೇ ದಿಲ್ ಪಸಂದ್ ಸಿನಿಮಾ ಚಿತ್ರೀಕರಣ ಆರಂಭ ಆಗಲಿದೆ.