'ಉಗ್ರಂ' ಸಿನಿಮಾ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಹೊರ ಹೊಮ್ಮಿದ ರವಿ ಬಸ್ರೂರು, ಮಫ್ತಿ, ಅಂಜನಿ ಪುತ್ರ, ಕೆಜಿಎಫ್, ಕೆಜಿಎಫ್ 2 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಇದೀಗ ತಮ್ಮದೇ ಆದ ಸ್ವಂತ ಸ್ಟುಡಿಯೋವೊಂದನ್ನು ಕಟ್ಟಿಕೊಂಡಿದ್ದಾರೆ.
ವಿಶೇಷ ಏನಂದ್ರೆ ಈ ಸ್ಟುಡಿಯೋವನ್ನು ತಮ್ಮ ಹುಟ್ಟೂರಾದ ಬಸ್ರೂರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಇಂದು ಹೊಸ ವರ್ಷದ ಮೊದಲ ದಿನ ತಮ್ಮ ಕನಸಿನ ಕೂಸಿನ ಉದ್ಘಾಟನೆ ಮಾಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು, ಈ ಕಾರ್ಯಕ್ರಮಕ್ಕೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ರನ್ನು ಆಹ್ವಾನ ನೀಡಿ ಅವರಿಂದಲೇ ಸ್ಟುಡಿಯೋ ಉದ್ಘಾಟನೆ ಮಾಡಿಸಿದ್ದಾರೆ.
ಈ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರವಿ ಬಸ್ರೂರು, 'ಇದು ನನ್ನ ಜೀವನದಲ್ಲಿ ಅತ್ಯುತ್ತಮ ದಿನ. ನನ್ನ ಹುಟ್ಟೂರಾದ ಬಸ್ರೂರಿನಲ್ಲಿ ಡ್ರೀಮ್ ಸ್ಟುಡಿಯೋ ನಿರ್ಮಿಸುವ ನನ್ನ ಮೊಂಡುತನದ ಕನಸು ಇಂದು ನಿಜವಾಯಿತು. ಸ್ಟುಡಿಯೋ ಮತ್ತು ನನ್ನ ಸಂಗೀತ ನಿರ್ದೇಶನಕ್ಕೆ ಮಾರ್ಗದರ್ಶಕರು ಪ್ರಶಾಂತ್ ನೀಲ್' ಎಂದು ಬರೆದುಕೊಂಡಿದ್ದಾರೆ.