ನಿನ್ನೆಯಷ್ಟೇ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ತಮ್ಮ ಮನೆ ಮುಂದಿನ ಹಳ್ಳವನ್ನು ಮುಚ್ಚಲು ತಾವೇ ಗುದ್ದಲಿ, ಬಾಣಲಿ ಹಿಡಿದು ರಸ್ತೆಗೆ ಇಳಿದಿದ್ದರು. ಹಂಸಲೇಖ ಅವರು ಈ ಕೆಲಸ ಮಾಡುವ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸರದಿ.
'ಉಗ್ರಂ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ರವಿ ಬಸ್ರೂರ್ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಕೆಜಿಎಫ್ ಚಿತ್ರದ 'ಸಲಾಂ ರಾಖಿ ಭಾಯ್' ಹಾಡನ್ನಂತೂ ಚಿಕ್ಕಮಕ್ಕಳು ಕೂಡಾ ಗುನುಗುವಂತೆ ಮಾಡಿದ್ದಾರೆ ರವಿ ಬಸ್ರೂರ್. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ರವಿ ಅವರ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆ ವಿಡಿಯೋದಲ್ಲಿ ಅಂತಾದ್ದೇನಿದೆ ಅಂತೀರಾ..? ರವಿ ಬಸ್ರೂರು ಸುತ್ತಿಗೆ ಹಿಡಿದು ಕುಲುಮೆ ಕೆಲಸ ಮಾಡುತ್ತಿದ್ದಾರೆ. ಇದೇನಪ್ಪಾ ಇದೇನಾದರೂ ರವಿ ಬಸ್ರೂರ್ ಸಿನಿ ಇಂಡಸ್ಟ್ರಿಗೆ ಬರುವ ಮುನ್ನ ತೆಗೆದ ಪೋಟೋನಾ ಎಂದುಕೊಳ್ಳಬೇಡಿ. ಇದು ಇತ್ತೀಚೆಗಷ್ಟೇ ತೆಗೆದ ಪೋಟೋ. ಸ್ವತ: ರವಿ ಬಸ್ರೂರ್ ತಾವು ಕುಲುಮೆ ಕೆಲಸ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲಾಕ್ಡೌನ್ ಘೋಷಣೆಯಾಗುವ ಮುನ್ನ ರವಿ ಕುಟುಂಬದೊಂದಿಗೆ ತಮ್ಮ ಸ್ವಂತ ಊರಾದ ಕುಂದಾಪುರದ ಬಸ್ರೂರಿಗೆ ತೆರಳಿದ್ದಾರೆ. ಆದರೆ ಅವರು ವಾಪಸ್ ಬರುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದೆ. ಈ ಕಾರಣದಿಂದ ರವಿ ತಮ್ಮ ಊರಿನಲ್ಲೇ ಉಳಿದುಕೊಂಡಿದ್ದಾರೆ. ಆದರೆ ಊರಿನಲ್ಲಿ ಅವರು ಸುಮ್ಮನೆ ಕುಳಿತಿಲ್ಲ. ತಮ್ಮ ಕುಲಕಸುಬಾದ ಅಕ್ಕಸಾಲಿಗ ಕೆಲಸವನ್ನು ಮಾಡುತ್ತಿದ್ದಾರೆ.
ರವಿ ಮೂಲತ: ವಿಶ್ವಕರ್ಮ ಸಮೂದಾಯಕ್ಕೆ ಸೇರಿದವರಾಗಿದ್ದು ರವಿ ತಂದೆ ಕೂಡಾ ಇದೇ ವೃತ್ತಿ ಮಾಡುತ್ತಿದ್ದಾರೆ. ದೇವರ ಬೆಳ್ಳಿ ಕಿರೀಟ ಮಾಡಿರುವ ಫೋಟೋವನ್ನು ಕೂಡಾ ರವಿ ಬಸ್ರೂರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನಕ್ಕೆ ಬರುವ ಮುನ್ನ ತಮ್ಮ ಊರಿನಲ್ಲಿ ಮರಗೆಲಸ, ಗಾರೆಕೆಲಸ ಕೂಡಾ ಮಾಡಿದ್ದಾರೆ. ಕೆಜಿಎಫ್ ಬಿಡುಗಡೆಯಾದ ನಂತರ ರವಿ ಬಸ್ರೂರ್ ಬೆಂಗಳೂರಿನಲ್ಲಿ ಆಧುನಿಕ ಟೆಕ್ನಾಲಜಿ ಹೊಂದಿರುವ ರೆಕಾರ್ಡಿಂಗ್ ಸ್ಟುಡಿಯೋವನ್ನು ಪ್ರಾರಂಭಿಸಿದ್ದಾರೆ. ಊರಿನಲ್ಲಿ ತಂದೆಯ ಅಕ್ಕಸಾಲೆಯಲ್ಲಿ ಕೆಲಸ ಮಾಡುವುದರ ಜೊತೆಗೆ ರವಿ ಬಸ್ರೂರ್ ತಾವು ಒಪ್ಪಿಕೊಂಡ ಸಿನಿಮಾಗಳ ಟ್ಯೂನ್ ಹಾಕುತ್ತಿದ್ದಾರೆ. ಸಂಗೀತ ನಿರ್ದೇಶನ ಮಾತ್ರವಲ್ಲದೆ, ರವಿ ಬಸ್ರೂರ್ 'ಗಿರ್ಮಿಟ್ 'ಚಿತ್ರದ ನಿರ್ದೇಶನ ಕೂಡಾ ಮಾಡಿದ್ದರು.