'ಬಾಹುಬಲಿ' ಸಿನಿಮಾದಲ್ಲಿ ಶಿವಗಾಮಿ ಪಾತ್ರ ಮಾಡಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡ ನಟಿ ರಮ್ಯಾ ಕೃಷ್ಣ, ಇದೀಗ ಮೊದಲ ಬಾರಿಗೆ ಕನ್ನಡದ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ.
ಜೀ ವಾಹಿನಿಯಲ್ಲಿ ಶೀಘ್ರದಲ್ಲೇ ಪ್ರಸಾರ ಆರಂಭಿಸಲಿರುವ 'ನಾಗಭೈರವಿ' ಧಾರಾವಾಹಿಯಲ್ಲಿ ರಮ್ಯಾ ಕೃಷ್ಣ ಪ್ರಮುಖ ಪಾತ್ರವಹಿಸಿದ್ದಾರೆ. ಈ ಧಾರಾವಾಹಿಯು ದೇಶದಲ್ಲಿರುವ ನಾಗರ ನಂಬಿಕೆಗಳ ಸುತ್ತಲೂ ರೂಪುಗೊಂಡಿರುವ ವಿನೂತನ ಕಥೆಯಾಗಿದೆ. ಪ್ರಾಚೀನ ಆರೋಗ್ಯ ಗ್ರಂಥ 'ಚರಕ ಸಂಹಿತಾ'ವನ್ನು ರಕ್ಷಿಸಲು ಭೈರವಿ ಮತ್ತು ನಾಗಾರ್ಜುನ ಒಂದು ಹಳೆಯ ದೇವಾಲಯದಲ್ಲಿ ವಾಸಿಸುತ್ತಿರುತ್ತಾರೆ. ಆದರೆ, ಪರಿಸ್ಥಿತಿಯ ಒತ್ತಡದಿಂದ ಅವರು ಪರಸ್ಪರ ಬೇರೆ ಆಗಬೇಕಾದಾಗ ಅವರ ಗುರಿಯನ್ನು ಈಡೇರಿಸಲು ಸಾಧ್ಯವಾಗುತ್ತದೆಯೇ ಎನ್ನುವುದು ಧಾರಾವಾಹಿಯ ಕುತೂಹಲಕಾರಿ ಅಂಶ.
ಸಸ್ಪೆನ್ಸ್ ಹಾಗೂ ಐತಿಹಾಸಿಕ ಅಂಶಗಳು ಇರುವುದರಿಂದ ಈ ಧಾರಾವಾಹಿ ವೀಕ್ಷಕರ ಕುತೂಹಲ ಹೆಚ್ಚಿಸುತ್ತದೆ. ಅದ್ಭುತ ಸೆಟ್ಗಳು, ವಿಶುವಲ್ ಎಫೆಕ್ಟ್ಸ್ ಮೂಲಕ ಈ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತದೆ ಎಂಬ ನಂಬಿಕೆ ತಂಡದ್ದು. ನಾಗಭೈರವಿ ಧಾರಾವಾಹಿಯು ಮಾರ್ಚ್ 1ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 3ರಿಂದ 4ರವರೆಗೆ ಪ್ರಸಾರವಾಗಲಿದೆ.
ಓದಿ: ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳ ಮುತ್ತಿಗೆ ಸರಿಯಲ್ಲ: ಸಾರಾ ಗೋವಿಂದು ಹೀಗೆ ಅಂದಿದಾದ್ರೂ ಯಾಕೆ?
ರಮ್ಯಾಕೃಷ್ಣ ಕನ್ನಡದಲ್ಲಿ ವಿಷ್ಣುವರ್ಧನ್, ರವಿಚಂದ್ರನ್ ಅವರೊಂದಿಗೆ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.