ಪ್ರತಿವರ್ಷ ರಾಜಸ್ಥಾನದ ಜೋಧಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ನಲ್ಲಿ ಸ್ಪರ್ಧೆಗಾಗಿ ಹಲವಾರು ದೇಶ- ವಿದೇಶಗಳ ಸಿನಿಮಾಗಳು ಸ್ಕ್ರೀನಿಂಗ್ ಆಗುತ್ತವೆ. ಈ ಬಾರಿ ಕನ್ನಡದಿಂದ 'ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರವೂ ಪ್ರದರ್ಶನ ಕಂಡು ಎಲ್ಲರಿಂದ ಉತ್ತಮ ಮೆಚ್ಚುಗೆ ಗಳಿಸಿದೆ. ಅಂತಿಮ ಹಂತದಲ್ಲಿ ಉತ್ತಮ ಕಥೆಗಾಗಿ ನೀಡುವ ಪ್ರಶಸ್ತಿ ಈ ಚಿತ್ರದ ಪಾಲಾಗಿದೆ.
ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಚಿತ್ರ ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಪ್ರದರ್ಶನ ಕಂಡು 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅದರಲ್ಲಿ ನಾಲ್ಕು ಕಡೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಬಂದಿದೆ. ಬಿಡುಗಡೆಗೂ ಮುನ್ನ ಎಲ್ಲೆಡೆ ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.
ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ.ಕೊಟಗಿ ಅವರು ನಿರ್ಮಿಸಿರುವ ಚಿತ್ರವನ್ನು ಸಿದ್ದು ಪೂರ್ಣಚಂದ್ರ ನಿರ್ದೇಶಿಸಿದ್ದಾರೆ. ವರ್ಧನ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅನುಷ, ತಿಥಿ ಚಿತ್ರದ ಖ್ಯಾತಿ ಪೂಜಾ, ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್. ಸುಚಿತ್, ಮೈಸೂರು ಬಸವರಾಜ್ ಮುಂತಾದವರಿದ್ದಾರೆ. ಲೋಕಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.