ಸಿಲ್ವರ್ಸ್ಕ್ರೀನ್ ಮೇಲೆ ಮಿಂಚುವ ಸ್ಟಾರ್ಗಳ ಸಿನಿಮಾಗಳನ್ನ ನೋಡಲು ಅದೆಷ್ಟೋ ಅಭಿಮಾನಿಗಳು ಇರ್ತಾರೆ. ಅವರ ಅಭಿಮಾನ ನೋಡಿ ನಟ, ನಟಿಯರು ಕೂಡ ಫಿದಾ ಆಗ್ತಾರೆ. ಈ ಮಾತಿಗೆ ಪೂರಕವಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನವೇ ಸಾಕ್ಷಿ.
ಹೌದು, ಸದ್ಯ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಸೌಮ್ಯ ಎಂಬ ಹುಡುಗಿ, ನಟ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ. ಇದೀಗ ಅವರನ್ನು ಕೊನೆಯದಾಗಿ ನೋಡಬೇಕು ಅನ್ನೋ ಆಸೆ ವ್ಯಕ್ತಪಡಿಸಿದ್ದಾರೆ.
ಮಗಳ ಕೊನೆಯ ದಿನಗಳ ಆಸೆಯನ್ನು ಈಡೇರಿಸೋಕೆ ಮುಂದಾಗಿರುವ ತಂದೆ ವೆಂಕಟೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಟ್ಟಿದ್ರು. ಅಂದ ಹಾಗೆ ಅಪ್ಪಟ ಅಭಿಮಾನಿಯ ಕಣ್ಣೀರಿನ ಕಥೆ ಅರಿತ ರಜನಿಕಾಂತ್ ಸಹೋದರ ಸತ್ಯನಾರಾಯಣ್ ಅವರು ಇತ್ತೀಚೆಗೆ ಸೌಮ್ಯ ಅವರ ಕುಟುಂಬವನ್ನ ಭೇಟಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ರಜನಿಕಾಂತ್ ಅವರಿಂದ ಸೌಮ್ಯಗೆ ವಿಡಿಯೋ ಕಾಲ್ ಮಾಡಿ ಸೌಮ್ಯಾಗೆ ಧೈರ್ಯ ತುಂಬೋ ಕೆಲಸ ಮಾಡಿದ್ದಾರೆ. ಧೈರ್ಯವಾಗಿರುವ ಏನೂ ಆಗಲ್ಲ ಅಂತ ಹೇಳಿರೋ ರಜನಿ ಕಂಡು ಸೌಮ್ಯ ಹಾಗೂ ಕುಟುಂಬ ನೋವಲ್ಲೂ ನಗುವಂತಹ ಗಳಿಗೆಗೆ ಸಾಕ್ಷಿಯಾಗಿದ್ದಾರೆ.
ಸದ್ಯ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಸೌಮ್ಯಗೆ ಸೂಪರ್ ಸ್ಟಾರ್ ರಜನಿಕಾಂತ್ ಧೈರ್ಯದ ಮಾತುಗಳನ್ನಾಡಿದ್ದಾರೆ. ಈ ಮೂಲಕ ತಲೈವಾ ತಮ್ಮ ಅಭಿಮಾನಿಯ ಕೊನೆಯ ಆಸೆ ಈಡೇರಿಸಿ ಧೈರ್ಯ ತುಂಬಿದ್ದಾರೆ.
ಇದು ಸೌಮ್ಯ ಕುಟುಂಬಕ್ಕೆ ಸದ್ಯದ ಮಟ್ಟಿಗೆ ನಗು ತರಿಸಿದೆ. ಒಟ್ಟಾರೆ ರಜನಿಕಾಂತ್ ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋ ಅನ್ನೋದು ಆಗಾಗ ಪ್ರೂವ್ ಆಗ್ತಾನೆ ಇರುತ್ತೆ. ಇನ್ನು ಸೌಮ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಆದಷ್ಟು ಬೇಗ ನೇರವಾಗಿ ರಜನಿಕಾಂತ್ ಅವರನ್ನ ಭೇಟಿ ಮಾಡುವಂತಹ ಕಾಲ ಬರಲಿ ಎಂಬುದು ಎಲ್ಲರ ಹಾರೈಕೆ ಆಗಿದೆ.
ಓದಿ: 'ಭಜರಂಗಿ 2' ಸಿನಿಮಾವನ್ನ ಪವರ್ ಸ್ಟಾರ್ ಅಪ್ಪುಗೆ ಅರ್ಪಿಸಿದ ಸೆಂಚುರಿ ಸ್ಟಾರ್