ಬಾಲಿವುಡ್ ಬಿಗ್ ಬಿ ಎಂದೇ ಖ್ಯಾತಿ ಹೊಂದಿರುವ ಅಮಿತಾಭ್ ಬಚ್ಚನ್ ಕಲಾ ರಂಗದಲ್ಲಿ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಹೇಬ್ ಪಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದ್ದಾರೆ. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ ಕೀರ್ತಿ ಅಮಿತಾಭ್ ಅವರಿಗೆ ಸಲ್ಲುತ್ತದೆ. ಇದಕ್ಕೆ ಹೋಲಿಸಿದೆರೆ ಚಂದನವನದ ನಟಸಾರ್ವಭೌಮ, ರಸಿಕರ ರಾಜ, ಡಾ.ರಾಜ್ ಕುಮಾರ್ ಅವರಿಗೆ 1995ರಲ್ಲಿಯೇ ಈ ಪ್ರಶಸ್ತಿ ಲಭಿಸಿದೆ.
ಅಂದಹಾಗೆ ಅಮಿತಾಭ್ ಅವರು ಸಿನಿಮಾ ಜರ್ನಿ ಶುರು ಮಾಡಿದ್ದು 1969ರಲ್ಲಿ ಸಾತ್ ಹಿಂದೂಸ್ಥಾನಿ ಚಿತ್ರದ ಮೂಲಕ. ಅದೇ ರಾಜ್ ಕುಮಾರ್ ಅವರು ನಟಿಸಿದ ಮೊದಲ ಚಿತ್ರ ತೆರೆ ಕಂಡಿದ್ದು 1954ರಲ್ಲಿ. ಬಿಗ್ ಬಿ ಅವರಿಗೂ 15 ವರ್ಷಗಳ ಮುನ್ನ ಸಿನಿಮಾ ಪ್ರಯಾಣ ಆರಂಭಿಸಿದ್ದ ರಾಜಣ್ಣ ಅವರ ಸಾಧನೆ ಗುರುತಿಸಿ 95ರಲ್ಲೇ ಭಾರತ ಸರ್ಕಾರ ಫಾಲ್ಕೆ ಗೌರವ ನೀಡಿತ್ತು. ಅಣ್ಣಾವ್ರು ಸಿನಿಮಾ ರಂಗದಲ್ಲಿ ಪ್ರಯಾಣಿಸಿದ 41 ವರ್ಷದ ಬಳಿಕ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗೆ ನೋಡುವುದಾದರೆ ಅಮಿತಾಭ್ ಅವರು ಸಿನಿ ಕರಿಯರ್ ಆರಂಭಿಸಿದ 50 ವರ್ಷಗಳ ತರುವಾಯ ಈ ಗೌರವ ಸಂದಿದೆ.
ಅಮಿತಾಭ್ ಬಚ್ಚನ್ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿಗಳು ಲಭಿಸಿವೆ. ಮೂರು ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ, 12 ಫಿಲ್ಮ್ ಫೇರ್ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಇನ್ನು ಅಮಿತಾಬ್ ಬಚ್ಚನ್ ಸಿನಿಮಾಗಳ ಬಗ್ಗೆ ಕಿರು ನೋಟ ನೋಡುವುದಾದರೆ, ಇವರ ಮೊಟ್ಟ ಮೊದಲ ಸಿನಿಮಾ ಸಾತ್ ಹಿಂದೂಸ್ಥಾನಿ. ಈ ಸಿನಿಮಾದಲ್ಲಿ ಏಳು ಮಂದಿ ನಾಯಕರುಗಳಿದ್ದು, ಅದ್ರಲ್ಲಿ ಅಮಿತಾಬ್ ಬಚ್ಚನ್ ಕೂಡ ಒಬ್ಬರಾಗಿದ್ದರು. ಈ ಸಿನಿಮಾ 1969ರಲ್ಲಿ ತೆರೆ ಕಂಡಿದ್ದು, ಈ ಸಿನಿಮಾ ಮೂಲಕ ಬಿಗ್ ಬಿ ತಾರಾ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ 1971ರಲ್ಲಿ ಬಂದ ಆನಂದ್ ಸಿನಿಮಾ ಕೂಡ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇನ್ನು 1972ರಲ್ಲಿ ಬಂದ ಬಾಂಬೆ ಟು ಗೋವಾ ಸಿನಿಮಾ ಕೂಡ ಆ ಕಾಲಕ್ಕೆ ದೊಡ್ಡ ಹೆಸರು ಮಾಡಿದ ಸಿನಿಮಾವೇ ಆಗಿತ್ತು.
ಅಮಿತಾಭ್ ಅವರು ಸಿನಿಮಾಗಳ ಜೊತೆ ಕೌನ್ ಬನೇಗ ಕರೋಡ್ ಪತಿ ಕಾರ್ಯಕ್ರಮದ ನಿರೂಪಕರಾಗಿಯೂ ಬಚ್ಚನ್ ಕಾರ್ಯ ನಿರ್ವಹಿಸಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಗಮನದಲ್ಲಿರಿಸಿಕೊಂಡು ಭಾರತ ಸರ್ಕಾರ ಇವರಿಗೆ ದಾದಾ ಸಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿದೆ.
ಮುತ್ತು ರಾಜನ ಸಿನಿ ಜರ್ನಿ: ಕನ್ನಡ ಸಿನಿಮಾ ರಂಗದಲ್ಲಿ ನಟಸಾರ್ವಭೌಮನೆಂದು ಕರೆಸಿಕೊಳ್ಳುವ ಡಾ.ರಾಜ್ ಕುಮಾರ್ ತಮ್ಮ ಸಿನಿ ಜೀವನವನ್ನು ಬೇಡರ ಕಣ್ಣಪ್ಪನಿಂದ ಪ್ರಾರಂಭಿಸುತ್ತಾರೆ. ಮೊದಲು ರಂಗಭೂಮಿಯಲ್ಲಿ ಅಪಾರ ಕೆಲಸ ಮಾಡಿರುವ ರಾಜಣ್ಣ, ಮೊದ ಮೊದಲು ಪೌರಾಣಿಕ ಸಿನಿಮಾದಲ್ಲಿಯೇ ನಟಿಸಿದರು.
ಇವರ ಬಣ್ಣದ ಲೋಕವನ್ನು ನೋಡುವುದಾದರೆ. ರಾಜಣ್ಣ ಮೊದಲು ನಾಯಕನಾಗಿ ನಟಿಸಿದ ಸಿನಿಮಾ ಬೇಡರ ಕಣ್ಣಪ್ಪ. ಇದಾದ ಮೇಲೆ, ಭಕ್ತ ವಿಜಯ, ಹರಿ ಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವರಾಯ ಸಿನಿಮಾಗಳು ಇವರಿಗೆ ಅಪಾರ ಹೆಸರು ತಂದುಕೊಟ್ಟಿವೆ.
ಇದಾದ ಮೇಲೆ ಬಂದ ಆಪರೇಷನ್ ಜಾಕ್ ಪಾಟ್, ಗೋವಾದಲ್ಲಿ ಸಿಐಡಿ, ಆಪರೇಷನ್ ಡೈಮಂಡ್ ರಾಕೇಟ್, ಸಿಐಡಿ ರಾಜಣ್ಣ ಸಿನಿಮಾಗಳು ಕೂಡ ಹೆಚ್ಚು ಹೆಸರು ಮಾಡಿದವು. ಇನ್ನು ಡಾ. ರಾಜ್ ಕುಮಾರ್ ನಟಿಸಿರುವ ನೂರನೇ ಸಿನಿಮಾ ಭಾಗ್ಯದ ಬಾಗಿಲು.
90ರ ದಶಕಲ್ಲಿ ತೆರೆ ಕಂಡ ಸಿನಿಮಾಗಳು ಕೂಡ ರಾಜ್ಗೆ ಉತ್ತಮ ಹೆಸರನ್ನು ನೀಡವೆ. ಕಸ್ತೂರಿ ನಿವಾಸ, ಸಾಕ್ಷತ್ಕಾರ, ಬಂಗಾರದ ಮನುಷ್ಯ, ಗಂಧದ ಗುಡಿ, ಸಂಪತ್ತಿಗೆ ಸವಾಲ್, ಮಯ್ಯೂರ, ಸನಾದಿ ಅಪ್ಪಣ್ಣ ಸಿನಿಮಾಗಳು ಕೂಡ ಅಭಿಮಾನಿ ಬಳಗವನ್ನು ಹೆಚ್ಚಿಸಿದೆ. ಹೀಗೆ ಉತ್ತಮ ಸಿನಿಮಾಗಳನ್ನು ಕೊಟ್ಟ ರಾಜಣ್ಣರ ಕೊನೆಯ ಸಿನಿಮಾ ಶಬ್ಧವೇಧಿ.
ರಾಜ್ ಕುಮಾರ್ ಕೇವಲ ನಟನಾಗಿ ಮಾತ್ರ ಮಿಂಚಿಲ್ಲ. ಗಾಯಕನಾಗಿ, ಕನ್ನಡ ಪರ ಹೋರಾಟಗಾರನಾಗಿ ಗೋಕಾಕ್ ಚಳುವಳಿ ಮುಂಚೂಣಿ ನಾಯಕರಾಗಿ ಸಾಧನೆ ಮಾಡಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಗುರುತಿಸಿದ ಕೇಂದ್ರ ಸರ್ಕಾರ 1995ರಲ್ಲಿ ದಾದಾ ಸಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.