ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿ ರಾಗಿಣಿ ಹೆಸರು ಕೇಳಿಬಂದಿರುವ ಹಿನ್ನೆಲೆ ರಾಗಿಣಿ ಸಿಸಿಬಿ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಸದ್ಯಕ್ಕೆ ರಾಗಿಣಿ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ಇತ್ತ 'ಗಾಂಧಿಗಿರಿ' ಚಿತ್ರತಂಡಕ್ಕೆ ಸಂಕಷ್ಟ ಶುರುವಾಗಿದೆ.
ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಹಾಗೂ ರಾಗಿಣಿ ದ್ವಿವೇದಿ ಅಭಿನಯದ ಆರ್ಜೆ ಸ್ಟುಡಿಯೋ ರಾಜೇಶ್ ಪಿ. ಪಟೇಲ್ ನಿರ್ಮಾಣದಲ್ಲಿ 'ಗಾಂಧಿಗಿರಿ' ಎಂಬ ಚಿತ್ರ 2017 ರಲ್ಲಿ ಆರಂಭವಾಗಿತ್ತು. ಚಿತ್ರವನ್ನು ರಘು ಹಾಸನ್ ನಿರ್ದೇಶಿಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಆದರೆ ನಂತರ ಪ್ರೇಮ್, 'ದಿ ವಿಲನ್' ಚಿತ್ರದಲ್ಲಿ ಬ್ಯುಸಿ ಆಗಿದ್ದರಿಂದ ಚಿತ್ರೀಕರಣ ಆರಂಭವಾಗುವುದು ತಡವಾಯ್ತು. ನಂತರ ಚಿತ್ರೀಕರಣ ಆರಂಭವಾಗಿ ಕೆಲವೇ ದಿನಗಳಲ್ಲಿ ಮುಗಿಯಲಿದೆ ಎನ್ನುವಷ್ಟರಲ್ಲಿ ಕೊರೊನಾ ಕಾಟದಿಂದ ಚಿತ್ರೀಕರಣ ರದ್ದಾಯಿತು. ಈಗ ಎಲ್ಲೆಡೆ ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್ ಆರಂಭಿಸೋಣ ಎಂದರೆ ರಾಗಿಣಿ ಸಿಸಿಬಿ ವಶದಲ್ಲಿದ್ದಾರೆ. ಚಿತ್ರತಂಡಕ್ಕೆ ಈಗ ದಿಕ್ಕು ತೋಚದಂತೆ ಆಗಿದೆ.
ಚಿತ್ರದಲ್ಲಿ ಪ್ರೇಮ್, ರಾಗಿಣಿ ದ್ವಿವೇದಿ, ಅರುಂಧತಿ ನಾಗ್, ಜೆ.ಡಿ. ಚಕ್ರವರ್ತಿ, ರಂಗಾಯಣ ರಘು, ಕುರಿ ಪ್ರತಾಪ್ ಹಾಗೂ ಇತರರು ಅಭಿನಯಿಸಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು ಶೇ. 20 ರಷ್ಟು ಬಾಕಿ ಉಳಿದಿದೆ. ಇದೇ ತಿಂಗಳ 14 ರಂದು ಚಿತ್ರೀಕರಣ ಆರಂಭಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದರು.
ಈ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಆರ್ಜೆ ಸ್ಟುಡಿಯೋ ಸಂಸ್ಥೆ, ಈ ಪರಿಸ್ಥಿತಿಗೆ ಪರಿಹಾರ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಫೆಬ್ರವರಿ 2017 ರಂದು 'ಗಾಂಧಿಗಿರಿ' ಚಿತ್ರ ಮೈಸೂರಿನಲ್ಲಿ ಮುಹೂರ್ತ ಆಚರಿಸಿಕೊಂಡಿತ್ತು. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ಧಾರೆ.