ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ ಕಸ್ಟಡಿ ಇಂದು ಅಂತ್ಯವಾಗಲಿದೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ನ್ಯಾಯಾಲಯದ ಎದುರು ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಡ್ರಗ್ಸ್ ಪ್ರಕರಣ ಆರೋಪ ಸಂಬಂಧ ವಾರದ ಹಿಂದೆ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಸರ್ಚ್ ವಾರೆಂಟ್ ಪಡೆದು ರಾಗಿಣಿ ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಿ ಮೂರು ದಿನಗಳ ಕಾಲ ವಶಕ್ಕೆ ಪಡೆಯಲಾಗಿತ್ತು.ಆದರೆ ರಾಗಿಣಿ ಈ 3 ದಿನಗಳು ಯಾವುದೇ ವಿಚಾರ ಬಾಯಿ ಬಿಡದ ಹಿನ್ನೆಲೆ ಮತ್ತೆ 5 ದಿನಗಳ ಕಾಲ ವಶಕ್ಕೆ ಪಡೆಯಲಾಯ್ತು. ಸಿಸಿಬಿ ಇನ್ಸ್ಪೆಕ್ಟರ್ ಅಂಜುಮಾಲಾ ಹಾಗೂ ಇನ್ಸ್ಪೆಕ್ಟರ್ ಕಾತ್ಯಾಯಿನಿ ವಿಚಾರಣೆ ನಡೆಸಿದರೂ ಕೂಡಾ ರಾಗಿಣಿ ಬಾಯಿ ಬಿಟ್ಟಿರಲಿಲ್ಲ.
ಇಂದು ರಾಗಿಣಿ ಕಸ್ಟಡಿ ಅಂತ್ಯ ಹಿನ್ನೆಲೆ ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರು ಪಡಿಸಿ ವಿಚಾರಣೆ ಅವಶ್ಯಕತೆ ಇಲ್ಲದಿದ್ದರೆ ನೇರವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸುವ ಸಾಧ್ಯತೆ ಇದೆ. ಅಥವಾ ವಿಚಾರಣೆಗೆ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಕೂಡಾ ಇದೆ. ಸದ್ಯ ಸಿಸಿಬಿ ಪೊಲೀಸರು ಮಾದಕ ದ್ರವ್ಯ ದಂಧೆಯಲ್ಲಿ ನಟಿ ಭಾಗಿಯಾಗಿರುವುದಕ್ಕೆ ಬೇಕಾದ ಟೆಕ್ನಿಕಲ್ ಸಾಕ್ಷ್ಯ ಕಲೆ ಹಾಕಿದ್ದು ಇದನ್ನೇ ನ್ಯಾಯಾಲಯದ ಎದುರು ಹಾಜರು ಪಡಿಸಲಿದ್ದಾರೆ. ಮತ್ತೊಂದೆಡೆ ರಾಗಿಣಿ ವಕೀಲರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಇಂದೇ ಅರ್ಜಿ ವಿಚಾರಣೆ ನಡೆಯಲಿದೆ. ರಾಗಿಣಿಗೆ ಜೈಲಾ..ಬೇಲಾ ಮಧ್ಯಾಹ್ನದ ವೇಳೆಗೆ ನಿರ್ಧಾರವಾಗಲಿದೆ.