ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಲುಕಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರೂ ಇಂದು ನಮಗೆ ಜಾಮೀನು ದೊರೆತು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಫ್ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ನಟಿಯರು ಕಳೆದ ವಾರವೇ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಒಂದೇ ಸೆಲ್ನಲ್ಲಿ ಉಳಿದುಕೊಂಡಿರುವ ರಾಗಿಣಿ ಹಾಗೂ ಸಂಜನಾ ಕಳೆದ ವಾರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಸಿಸಿಬಿ ಅಧಿಕಾರಿಗಳು ಅರ್ಜಿ ಆಕ್ಷೇಪಣೆಗೆ ಸಮಯಾವಕಾಶ ಕೇಳಿದ್ದರಿಂದ ನಟಿಯರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತ್ತು. ಇಂದು ಸಿಟಿ ಸಿವಿಲ್ ಆವರಣದ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ವೈಭವದ ಜೀವನ ನಡೆಸುತ್ತಿದ್ದ ಇಬ್ಬರೂ ನಟಿಯರು ಕಳೆದ ವಾರದಿಂದ ಜೈಲಿನಲ್ಲಿ ಬಂಧಿಯಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಾಮೀನು ನೀಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ದೊರೆಯಲಿದೆಯಾ ಇಲ್ಲವಾ ಎಂಬ ಟೆನ್ಶನ್ನಲ್ಲಿದ್ದಾರೆ. ಮತ್ತೊಂದೆಡೆ ಜೈಲು ಆವರಣದಲ್ಲಿರುವ ಫೋನ್ ಬೂತ್ ಮೂಲಕ ತಮ್ಮ ವಕೀಲರಿಗೆ ಕರೆ ಮಾಡಿ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.