'ಸೈಕೋ' ಸಿನಿಮಾದ 'ನಿನ್ನ ಪೂಜೆಗೆ ಬಂದೇ ಮಾದೇಶ್ವರ' ಹಾಡಿನ ಮೂಲಕ ಬೆಳಕಿಗೆ ಬಂದ ಗಾಯಕ ರಘುದೀಕ್ಷಿತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಹೆಸರು ಮಾಡಿದ್ದಾರೆ. ಕನ್ನಡ ಸಿನಿಮಾಗಳು ಮಾತ್ರವಲ್ಲ ಹಿಂದಿ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಿಗೆ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಕೂಡಾ ರಘು ಹೆಸರು ಮಾಡಿದ್ದಾರೆ.
![mayuri](https://etvbharatimages.akamaized.net/etvbharat/prod-images/raghudikkithmayuridaiver_13062019214152_1306f_1560442312_245.jpg)
ಇನ್ನು ರಘುದೀಕ್ಷಿತ್ ಪತ್ನಿ ಮಯೂರಿ ಕೂಡಾ ಖ್ಯಾತ ಶಾಸ್ತ್ರೀಯ ನೃತ್ಯ ಕಲಾವಿದೆ. ಆಕೆ ಕೂಡಾ ದೇಶ ವಿದೇಶಗಳಲ್ಲಿ ಡ್ಯಾನ್ಸ್ ಶೋಗಳನ್ನು ನೀಡಿದ್ದಾರೆ. ಆದರೆ, ಈ ದಂಪತಿ ವೈವಾಹಿಕ ಜೀವನದಲ್ಲಿ ಈಗ ಬಿರುಕು ಮೂಡಿದೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13B(1)ರ ಅಡಿ ರಘು ದೀಕ್ಷಿತ್ ಹಾಗೂ ಮಯೂರಿ ಡೈವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ರಘು ಹಾಗೂ ಮಯೂರಿ ಸುಮಾರು 2-3 ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
![raghu dixit](https://etvbharatimages.akamaized.net/etvbharat/prod-images/raghudikkithmayuridaiver_13062019214152_1306f_1560442312_18.jpg)
ಇನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಗಾಯಕ ರಘು ದೀಕ್ಷಿತ್ ವಿರುದ್ಧ ತಮಿಳು ಗಾಯಕಿ ಚಿನ್ಮಯಿ ಶ್ರೀ ಪಾದ್ ಮಿ ಟೂ ಆರೋಪ ಮಾಡಿದ್ದರು. ರಘು ದೀಕ್ಷಿತ್ ತನ್ನ ಸ್ನೇಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚಿನ್ಮಯಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಘು ದೀಕ್ಷಿತ್ 'ಚಿನ್ಮಯಿ ಆರೋಪ ನಿಜ. ಆದರೆ, ಅದು ಅವರು ಹೇಳಿದ ರೀತಿಯಲ್ಲಿರಲಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಟ್ವಿಟರ್ ಮೂಲಕ ಬಹಿರಂಗ ಕ್ಷಮೆ ಯಾಚಿಸಿದ್ದರು. ಇನ್ನು ಮಯೂರಿ ಕೂಡಾ ಈ ವೇಳೆ ಮಹಿಳೆಯ ಮೇಲೆ ದೌರ್ಜನ್ಯ ಎಸಗುವ ಪ್ರತಿ ಪುರುಷನಿಗೂ ಶಿಕ್ಷೆಯಾಗಲೇಬೇಕು ಎಂದು ಹೇಳಿದ್ದರು. ಆದರೆ ವಿಚ್ಛೇದನಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ.