ಇದೀಗ ಮದುವೆ ಸೀಸನ್ ಆರಂಭವಾಗಿದೆ ಎಂದರೆ ತಪ್ಪಾಗಲಾರದು. 'ಅಗ್ನಿಸಾಕ್ಷಿ' ನಟಿ ಇಶಿತ ವರ್ಷ, 'ಕುಲವಧು' ನಟಿ ದೀಪಿಕಾ, 'ಅನುರೂಪ' ಧಾರಾವಾಹಿಯ ನಟ ರಿಷಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೆಲ್ಲಾ ನಿನ್ನೆ ಮೊನ್ನೆ ನಡೆಯಿತು ಎನ್ನುವಾಗ ಇದೀಗ ಮತ್ತೊಬ್ಬ ಕಲಾವಿದೆಯ ಮದುವೆ ಫಿಕ್ಸ್ ಆಗಿದೆ. ಮದುವೆಗೆ ಸಜ್ಜಾಗಿರುವುದು ಬೇರೆ ಯಾರು ಅಲ್ಲ ರಚಿತಾ ರಾಮ್ ಸಹೋದರಿ.
ಹೌದು, ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕ, ನಂದಿನಿ ಧಾರಾವಾಹಿಯ ಜನನಿ ಪಾತ್ರಧಾರಿ ನಿತ್ಯಾ ರಾಮ್ ಮುಂದಿನ ತಿಂಗಳು ಹಸೆಮಣೆ ಏರಲಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿಯ ಮೂಲಕ ಬಣ್ಣದ ಪಯಣ ಆರಂಭಿಸಿದ ನಿತ್ಯಾ ರಾಮ್ ಮುಂದೆ ಕರ್ಪೂರದ ಗೊಂಬೆ, ರಾಜಕುಮಾರಿ, ಗಿರಿಜಾ ಕಲ್ಯಾಣ ಧಾರಾವಾಹಿಗಳಲ್ಲಿ ನಟಿಸಿದ್ದರು. ಇದರೊಂದಿಗೆ ನಂದಿನಿ ಭಾಗ-1ರಲ್ಲಿ ಗಂಗಾಳಾಗಿದ್ದ ನಿತ್ಯಾ, ಕಿರುತೆರೆ ಪ್ರಿಯರ ಮನ ಗೆದ್ದುಬಿಟ್ಟರು. ಇದೀಗ ನಂದಿನಿ- 2ರಲ್ಲಿ ಜನನಿಯಾಗಿ ಮನೋಜ್ಞವಾಗಿ ನಟಿಸುತ್ತಿರುವ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಇನ್ನು ನಿತ್ಯಾ ರಾಮ್ ಮದುವೆಯ ದಿನಾಂಕವನ್ನು ಡಿಸೆಂಬರ್ 6ರಂದು ನಿಗದಿ ಮಾಡಲಾಗಿದೆ. ಆದ್ರೆ ನಿತ್ಯಾ ಮದುವೆಯಾಗುತ್ತಿರುವ ಹುಡುಗ ಯಾರೆಂಬುದು ತಿಳಿದುಬಂದಿಲ್ಲ. ಆದ್ರೆ ಕೆಲವು ಮೂಲಗಳ ಪ್ರಕಾರ ನಿತ್ಯಾ ಮದುವೆಯಾಗುತ್ತಿರುವ ಹುಡುಗ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿದ್ದಾರೆ ಎನ್ನಲಾಗಿದೆ.