ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್ ಇನ್ನೊಂದು ಚಿತ್ರ ಬರಲಿದೆ ಎಂಬ ಸುದ್ದಿ ‘ಯುವರತ್ನ’ ಬಿಡುಗಡೆಯ ಮುಂಚೆಯೇ ಕೇಳಿಬಂದಿತ್ತು. ಅಷ್ಟೇ ಅಲ್ಲ, ‘ಜೇಮ್ಸ್’ ಚಿತ್ರದ ಚಿತ್ರೀಕರಣ ಮುಗಿಸಿ, ಪುನೀತ್ ಮತ್ತೆ ಸಂತೋಷ್ ನಿರ್ದೇಶನದ ಹೊಸ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಆಗಿದ್ದೇ ಬೇರೆ. ‘ಲೂಸಿಯಾ’ ಪವನ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಪುನೀತ್ ಒಪ್ಪಿದ್ದಾರೆ. ಹಾಗಾದರೆ, ಸಂತೋಷ್ ಜೊತೆಗೆ ಪುನೀತ್ ಸಿನಿಮಾ ಯಾವಾಗ? ಎಂಬ ಪ್ರಶ್ನೆ ಅವರ ಅಭಿಮಾನಿವಲಯದಲ್ಲಿ ಕೇಳಿಬರುತ್ತಿದೆ.
ಪುನೀತ್ ಮತ್ತು ಸಂತೋಷ್ ಅವರ ಜೋಡಿ, ಕನ್ನಡ ಚಿತ್ರರಂಗದಲ್ಲಿ ಹಿಟ್ ಜೋಡಿ ಎಂದು ಗುರುತಿಸಿಕೊಂಡಿದೆ. ‘ರಾಜ್‍ಕುಮಾರ’ ಚಿತ್ರದಲ್ಲಿ ಅವರಿಬ್ಬರೂ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ್ದರು. ಚಿತ್ರ ಹಿಟ್ ಆಗಿತ್ತು. ಎರಡನೇ ಚಿತ್ರ ‘ಯುವರತ್ನ’ ಸಹ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಹೀಗಿರುವಾಗಲೇ, ಅವರಿಬ್ಬರೂ ಇನ್ನೊಂದು ಚಿತ್ರದಲ್ಲಿ ಕೆಲಸ ಮಾಡುತ್ತಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಇನ್ನಷ್ಟು ಖುಷಿ ತಂದಿತ್ತು. ಈ ಚಿತ್ರದ ಮೂಲಕ ಈ ಜೋಡಿ ಹ್ಯಾಟ್ರಿಕ್ ಹೊಡೆಯಬಹುದು ಎಂದು ಎಲ್ಲರೂ ಕಾಯುವಾಗಲೇ, ಅವರಿಬ್ಬರೂ ಸದ್ಯ ಜೊತೆಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಏಕೆಂದರೆ, ಸದ್ಯಕ್ಕಂತೂ ಪುನೀತ್ ಮತ್ತು ಸಂತೋಷ್ ಒಟ್ಟಿಗೆ ಕೆಲಸ ಮಾಡುವುದು ಕಷ್ಟ. ಏಕೆಂದರೆ, ಪುನೀತ್ ಮೊದಲಿಗೆ ‘ಜೇಮ್ಸ್’ ಮುಗಿಸಬೇಕಿದೆ. ಆ ನಂತರ ಅವರ ಕೈಯಲ್ಲಿ ಇನ್ನೊಂದಿಷ್ಟು ಚಿತ್ರಗಳಿವೆ. ಅವೆಲ್ಲ ಮುಗಿಸುವುದಕ್ಕೆ ಇನ್ನೊಂದು ವರ್ಷವಾದರೂ ಬೇಕು. ಆ ನಂತರವಷ್ಟೇ ಪುನೀತ್ ಮತ್ತು ಸಂತೋಷ್ ಒಟ್ಟಿಗೆ ಕೆಲಸ ಮಾಡುವುದಕ್ಕೆ ಸಾಧ್ಯ. ಸಂತೋಷ್ ಅಲ್ಲಿಯವರೆಗೂ ಕಾಯುತ್ತಾರಾ ಅಥವಾ ಗ್ಯಾಪ್‍ನಲ್ಲಿ ಇನ್ನೊಂದು ಚಿತ್ರ ಮುಗಿಸಿಕೊಂಡು ಬರುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಉತ್ತರಕ್ಕಾಗಿ ಇನ್ನಷ್ಟು ದಿನ ಕಾಯಲೇಬೇಕು.