'ನೀನು ಗ್ಯಾಂಗ್‌ಸ್ಟರ್ ಆದ್ರೆ ನಾನು ಸೋಲ್ಜರ್' ಅಂತಾ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾದ ಕ್ಲೈಮಾಕ್ಸ್ನಲ್ಲಿ ಹೇಳುವ ಸಂಭಾಷಣೆ ಸಿನಿಮಾ ನೋಡಿ ಥಿಯೇಟರ್‌ನಿಂದ ಹೊರಬರುವ ಪ್ರೇಕ್ಷಕರ ಕಿವಿಯಲ್ಲಿ ಅನುರಣಿಸುತ್ತದೆ.
ಪುನೀತ್ ಅಗಲಿಕೆಯ ನೋವು ರಾಜ್ಯದ ಜನಮಾನಸದಲ್ಲಿ ಮಡುಗಟ್ಟಿದೆ. ಇದೀಗ ಅವರ ನಟನೆಯ ಕೊನೆಯ ಚಿತ್ರ ಪುನೀತ್ ಎಲ್ಲೋ ನಮ್ಮೊಂದಿಗಿದ್ದಾರೆ ಎನ್ನುವ ನಂಬಿಕೆಯನ್ನು ಹೆಚ್ಚಿಸುತ್ತಿದೆ. ಪವರ್ ಸ್ಟಾರ್ ಅಭಿನಯದ ಜೇಮ್ಸ್ ಸಿನಿಮಾ ಕರ್ನಾಟಕವಷ್ಟೇ ಅಲ್ಲ, ಬೇರೆ ರಾಜ್ಯಗಳು ಹಾಗು ವಿದೇಶಗಳ 4,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಿದೆ.
ಅಪ್ಪು ಇಲ್ಲವಾದ ನಂತರ ಬಿಡುಗಡೆಯಾದ ಈ ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡಿತ್ತು. ಇನ್ನು ಅಪ್ಪು ಕೊನೆಯ ಸಿನಿಮಾ ಅನ್ನೋ ಸಿಂಪತಿಯಿಂದ ಈ ಸಿನಿಮಾ ನೋಡುವ ಅವಶ್ಯಕತೆ ಇಲ್ಲ ಎಂದೇ ಹೇಳಬಹುದು. ಯಾಕೆಂದರೆ, ದೇಶಪ್ರೇಮದ ಜೊತೆ ಸ್ನೇಹ ಸಂಬಂಧದ ಮೌಲ್ಯ ಹೆಚ್ಚಿಸುವ ವಿಷಯ ಈ ಚಿತ್ರದಲ್ಲಿದೆ. ಅದೆಲ್ಲಕ್ಕೂ ಮಿಗಿಲಾಗಿ ಚಿತ್ರದಲ್ಲಿ ಅಪ್ಪು ನಟನೆ ರೋಚಕತೆಯಿಂದ ಕೂಡಿದೆ. ನಿರ್ದೇಶಕ ಚೇತನ್ ಕುಮಾರ್ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ಮಾಫಿಯಾ ಸುತ್ತ ಕಥೆ ಹೆಣೆದಿದ್ದು, ಪುನೀತ್ ಆರ್ಮಿ ಲುಕ್ನಲ್ಲಿ ಅಚ್ಚುಕಟ್ಟಾಗಿ ಸ್ಕ್ರೀನ್ ಪ್ಲೇ ನಿರ್ವಹಿಸಿದ್ದಾರೆ.
ಭದ್ರತಾ ಸಿಬ್ಬಂದಿಯಾಗಿ ಈ ಚಿತ್ರದಲ್ಲಿ ಅಪ್ಪು ಅಭಿನಯಿಸಿದ್ದಾರೆ. ಇದೇ ಇಡೀ ಚಿತ್ರದ ಜೀವಾಳವೆನ್ನಬಹುದು. ಗ್ಯಾಂಗ್ಸ್ಟಾರ್ ಒಬ್ಬನಿಗೆ ಭದ್ರತೆ ಒದಗಿಸಲು ನೇಮಕವಾಗುವ ಅವರ ಪಾತ್ರ ಸೊಗಸಾಗಿ ಮೂಡಿಬಂದಿದೆ. ಭದ್ರತಾ ಕೆಲಸದ ಜೊತೆಗೆ ಎದುರಾಳಿ ಗ್ಯಾಂಗ್ಸ್ಟಾರ್ಗಳಿಂದ ಕುಟುಂಬವನ್ನು ರಕ್ಷಣೆ ಮಾಡುವುದು ಇವರ ಕರ್ವವ್ಯ. ಆ ಕುಟುಂಬದಲ್ಲಿ ಒಬ್ಬರಾಗಿ ಸ್ಥಾನ ಪಡೆಯುವ ಹೊತ್ತಲ್ಲೇ ಒಂದು ಅನಾಹುತ ಜರುಗುತ್ತದೆ. ಈ ಅನಾಹುತ ಏನು ಅನ್ನೋದನ್ನು ಚಿತ್ರ ನೋಡಿಯೇ ತಿಳಿಯಬೇಕು.
ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಡಾನ್‌ಗಳಾಗಿ ನಟ ಶರತ್ ಕುಮಾರ್, ಮುಖೇಶ್ ತಿವಾರಿ ಹಾಗು ತೆಲುಗು ನಟ ಶ್ರೀಕಾಂತ್ ಮೇಕಾ ಹಾಗು ಆದಿತ್ಯ ಮೆನಸ್ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಜೇಮ್ಸ್ ಚಿತ್ರದ ಮೊದಲಾರ್ಧ ಭರಪೂರ ಆಕ್ಷನ್ ದೃಶ್ಯಗಳಿಂದ ತುಂಬಿದೆ. ದ್ವಿತೀಯಾರ್ಧದಲ್ಲಿ ಫ್ಲಾಶ್‌ಬ್ಯಾಕ್ ಇದೆ. ಔಟ್ ಅಂಡ್ ಔಟ್ ಆಕ್ಷನ್ ಧಮಾಕಾ ಇರುವ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಹಾಗು ಪ್ರಿಯಾ ಆನಂದ್ಗೆ ಲವ್ ಸ್ಟೋರಿ ಇಲ್ಲ. ಸಾಧುಕೋಕಿಲ ತೆರೆಯಲ್ಲಿ ಬರುವ ಅಷ್ಟೂ ಸಲ ನಗಿಸಿ ಹೋಗುತ್ತಾರೆ.
ತಿಲಕ್, ಚಿಕ್ಕಣ್ಣ, ಶೈನ್ ಶೆಟ್ಟಿ ಹಾಗು ರಾಜಾ ಹುಲಿ ಹರ್ಷ ಪುನೀತ್ ಗೆಳೆಯರ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಇದರ ಜೊತೆಗೆ, ಸುಚೇಂದ್ರ ಪ್ರಸಾದ್, ಅನು ಪ್ರಭಾಕರ್ ಹಾಗೂ ರಂಗಾಯಣ ರಘು ಪಾತ್ರಗಳು ಪ್ರೇಕ್ಷಕರಿಗೆ ಹಿತ ನೀಡುತ್ತವೆ. ಚಿತ್ರದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಪಾತ್ರಗಳು ಕೂಡ ವಿಶೇಷವಾಗಿವೆ. ಯಾಕೆಂದರೆ ಅಭಿಮಾನಿಗಳು ಅಂದಿನಿಂದಲೂ ದೊಡ್ಡಮನೆಯ ಮೂವರೂ ಒಟ್ಟಾಗಿ ಸೇರಿ ತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದರು. ಆ ಆಸೆ ಈ ಚಿತ್ರದಲ್ಲಿ ನೆರವೇರಿದೆ ಎನ್ನಬಹುದು.
ನಿರ್ದೇಶಕ ಚೇತನ್ ಕುಮಾರ್ ಸಣ್ಣ ಎಳೆಯ ಕಥೆಯನ್ನು ವಿಭಿನ್ನವಾಗಿ ಹೇಳುವ ಮೂಲಕ ಅಪ್ಪು ಅಭಿಮಾನಿಗಳಿಗೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಪುನೀತ್ ಅವರ ಧ್ವನಿ ಇಲ್ಲ ಅನ್ನೋ ಕೊರಗಿಲ್ಲ. ಕಾರಣ ಡೈರೆಕ್ಟರ್ ಚೇತನ್ ಮೊದಲೇ ಹೇಳಿದಂತೆ ಚಿತ್ರದ ವೇಗ ಆ ಧ್ವನಿಯನ್ನು ಮರೆಸುವಂತಿದೆ. ಯಾವ ಪರಭಾಷೆಯ ಸಿನಿಮಾಗೆ ಕಮ್ಮಿ ಇಲ್ಲದೆ ಹಾಗೆ ಅದ್ಧೂರಿ ಮಟ್ಟದಲ್ಲಿ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಈ ಸಿನಿಮಾ ನಿರ್ಮಿಸಿದ್ದಾರೆ.
ಜೇಮ್ಸ್ ಚಿತ್ರಕ್ಕೆ ಸ್ವಾಮಿ ಜೆ.ಗೌಡ ಕ್ಯಾಮೆರಾ ಕೈಚಳಕ ಇದ್ದು, ಚರಣ್ ರಾಜ್ ಹಿನ್ನೆಲೆ ಸಂಗೀತ ಕಿವಿಗಿಂಪು ನೀಡುತ್ತದೆ. ಪ್ಯಾನ್ ಇಂಡಿಯಾ ಸಿನಿಮಾಗೆ ಬೇಕಾಗುವ ಯೂನಿವರ್ಸಲ್ ಸಬ್ಜೆಕ್ಟ್ ಚಿತ್ರದಲ್ಲಿದೆ.