ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಮಗ ಪುನೀತ್ ರಾಜ್‍ಕುಮಾರ್ ನಿಧನ ಸುದ್ದಿಯನ್ನ ಅಭಿಮಾನಿಗಳು ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್ ಅಕಾಲ ಮರಣಕ್ಕೆ ತುತ್ತಾಗಿ ಒಂದು ವಾರವಾಗಿದೆ. ಆದರೆ ಅಪ್ಪು ಅಭಿಮಾನಿಗಳು ಪವರ್ಸ್ಟಾರ್ ಇಲ್ಲದೆ ನಾವು ಯಾಕೆ ಇರಬೇಕು ಎಂದು ಮನನೊಂದು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.
ಇಲ್ಲಿವರೆಗೂ ರಾಜ್ಯದಲ್ಲಿ 12ಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ನಾಗವಾರದ ನಿವಾಸದಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್, ಅಪ್ಪು ಅಭಿಮಾನಿಗಳು ಆತ್ಮಹತ್ಯೆ ನಿರ್ಧಾರ ಮಾಡದಂತೆ ಕೈ ಮುಗಿದು ಮನವಿ ಮಾಡಿತ್ತೇನೆ. ಅಪ್ಪು ಇರದ ನೋವು ನಮ್ಮೆಲ್ಲರಲ್ಲೂ ಇದೆ. ಅದನ್ನು ಒಪ್ಪಿಕೊಂಡು ಮುಂದೆ ಸಾಗಬೇಕು. ಅಪ್ಪು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸೋಣ. ಆ ಮೂಲಕ ಅಪ್ಪುವನ್ನು ಜೀವಂತವಾಗಿರಿಸೋಣ. ನಿಮ್ಮ ಕುಟುಂಬಕ್ಕೆ ನೀವು ಮುಖ್ಯ, ನಮಗೆ ನೀವು ಮುಖ್ಯ. ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ಮಾಡಬೇಡಿ ಎಂದು ಶಿವಣ್ಣ ಮನವಿ ಮಾಡಿದ್ದಾರೆ.
ಪುನೀತ್ ಮತ್ತೊಬ್ಬ ಅಣ್ಣನಾದ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪಾದಕ್ಕೆ ನಮಸ್ಕರಿಸುತ್ತೇವೆ ವಿನಂತಿ ಮಾಡಿಕೊಂಡಿದ್ದಾರೆ.
ಅಭಿಮಾನಿಗಳ ಸಾವಿಗೆ ನನ್ನ ಪತಿ ಕಾರಣ ಆಗಬಾರದು ಅಂತಾ ಅಶ್ವಿನಿ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಬಳಿ ನೋವನ್ನು ಹೇಳಿಕೊಂಡಿದ್ದಾರಂತೆ. ಹೀಗಾಗಿ ಪುನೀತ್ ರಾಜ್‍ಕುಮಾರ್ ಸಹೋದರರು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದು ಅಂತಾ ಮನವಿ ಮಾಡಿಕೊಂಡಿದ್ದಾರೆ.