ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹಿನ್ನೆಲೆ ಸರ್ಕಾರವು ಕೆಲ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿ ಚಲನಚಿತ್ರ ಮಂದಿರಗಳಲ್ಲಿ ಶೇಕಡಾ 50 ವೀಕ್ಷಕರನ್ನಷ್ಟೇ ನಿಗದಿಪಡಿಸಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಿಎಂ ಸಿವಾಸದ ಎದುರು ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರ ಕೋವಿಡ್ ನೂತನ ಮಾರ್ಗಸೂಚಿಯಲ್ಲಿ ಚಲನಚಿತ್ರ ಮಂದಿರಗಳಲ್ಲಿ ಶೇಕಡಾ 50 ವೀಕ್ಷಕರನ್ನಷ್ಟೇ ನಿಗದಿಪಡಿಸಿದ್ದು, ಇದರಿಂದಾಗಿ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ 'ಯುವರತ್ನ' ಸಿನಿಮಾಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ಸಿನಿಮಾ, ವಿ ವಾಂಟ್ 100 ಪರ್ಸೆಂಟ್ ಆಕ್ಯುಪೆನ್ಸಿ ಎಂಬ ಅಭಿಮಾನ ಶುರು ಮಾಡಿರುವ ಪುನೀತ್ ಅಭಿಮಾನಿಗಳು, ಯಾವುದೇ ಪೂರ್ವ ಸೂಚನೆ ನೀಡದೇ ಏಕಾಏಕಿ 50 ಪರ್ಸೆಂಟ್ ಹಾಜರಾತಿಗೆ ಮಾತ್ರ ಅನುಮತಿ ಎಂದರೆ ಇದನ್ನೇ ನಂಬಿಕೊಂಡಿರುವ ಕಾರ್ಮಿಕರು, ನಿರ್ಮಾಪಕರು ವಿತರಕರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಚ್ಚರಿಕೆ ನೀಡಿರುವ ಅಭಿಮಾನಿಗಳು, ಆದಷ್ಟು ಬೇಗ ಈ ಮಾರ್ಗಸೂಚಿಯನ್ನು ಹಿಂಪಡೆಯದೇ ಇದ್ದಲ್ಲಿ ರಾಜ್ಯಾದ್ಯಂತ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಮುಂದೆಯಾದರೂ ಸರಿ, ಕನ್ನಡ ಸಿನಿಮಾಗಾಗಿ ಎಲ್ಲ ಜಿಲ್ಲೆಗಳಲ್ಲೂ ಧ್ವನಿ ಎತ್ತುವುದಕ್ಕೆ ನಿರ್ಧರಿಸಿದ್ದಾರೆ. ಚಿತ್ರಮಂದಿರರಕ್ಕೆ ಬರಬೇಕೋ, ಬೇಡವೋ ಎಂದು ಜನ ತೀರ್ಮಾನಿಸಲಿ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಓದಿ: ಚಲನಚಿತ್ರ ಮಂದಿರಗಳಲ್ಲಿ ವೀಕ್ಷಕರ ಸಂಖ್ಯೆಗೆ ಕಡಿವಾಣ: ಸರ್ಕಾರದ ನಡೆಗೆ ಪುನೀತ್ ರಾಜ್‌ಕುಮಾರ್ ಅಸಮಾಧಾನ