'ಹೆಬ್ಬುಲಿ', 'ಒಂದಲ್ಲಾ ಎರಡಲ್ಲಾ' ಹಾಗು 'ರಾಬರ್ಟ್'ಗಳಂತಹ ಸಿನಿಮಾ ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕ ಎಂದು ಕರೆಯಿಸಿಕೊಂಡಿರುವವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.
ಉಮಾಪತಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಬಿಗ್ ಬಜೆಟ್ ಸಿನಿಮಾಗಳ ಜತೆಗೆ ಹೊಸ ನಿರ್ದೇಶಕರು ಹಾಗು ತಂತ್ರಜ್ಞರಿಗೆ ಅವಕಾಶ ಕೊಡುವ ಉದ್ದೇಶ ಹೊಂದಿರುವ ಉಮಾಪತಿ ಎಸ್. ಗೌಡ ಸದ್ಯ 'ಮದಗಜ' ಎಂಬ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ನಿನ್ನೆಯಷ್ಟೇ (ಶನಿವಾರ) ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಈ ಸಿನಿಮಾದ (Madagaja movie trailer) ಟ್ರೈಲರ್ ಬಿಡುಗಡೆ ಮಾಡಿಸಿದ್ದಾರೆ. ರೈತರ ಮೇಲೆ ಅಭಿಮಾನ ಹೊಂದಿದ್ದು, ಸಿಎಂ ಪರಿಹಾರ ನಿಧಿಗೆ 11 ಲಕ್ಷ ರೂ. ಚೆಕ್ ನೀಡಿದ್ದಾರೆ.
ಮದಗಜ ಸಿನಿಮಾವನ್ನು ಮೊದಲಿಗೆ ಕನ್ನಡದಲ್ಲಿ ಮಾಡಬೇಕು ಅಂದುಕೊಂಡಿದ್ರಂತೆ. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಸಲಹೆಯ ಮೇರೆಗೆ ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲು ತೀರ್ಮಾನ ಮಾಡಿದರಂತೆ.
ನಟ ಶ್ರೀಮುರಳಿ ಬಗ್ಗೆ ಮಾತನಾಡುತ್ತಾ, ಬಹಳ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ಧೇವೆ. ಇದು ಮುರಳಿಯವರಿಗೆ ದೊಡ್ಡಮಟ್ಟದ ಹೆಸರು ತಂದುಕೊಡುತ್ತದೆ. ಒಂದು ಸಿನಿಮಾ ಹಿಂದೆ, ನಾನೊಬ್ಬನೇ ಅಂತಾ ಹೇಳಿಕೊಳ್ಳಬಾರದು, ನಿರ್ದೇಶಕರು, ಕ್ಯಾಮರಾಮ್ಯಾನ್ ಸೇರಿ ಹಲವು ತಂತ್ರಜ್ಞರು ಕೆಲಸ ಮಾಡಿರುತ್ತಾರೆ ಎಂದರು.
'ಕಂಡ ಕನಸು ಕನಸಾಗಿಯೇ ಉಳೀತು':
'ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜತೆ ಒಂದು ಸಿನಿಮಾ ಮಾತುಕತೆ ಆಗಿತ್ತು. ನಿರ್ದೇಶಕರು ಕೂಡ ಓಕೆ ಆಗಿತ್ತು. ಅಪ್ಪು ಸಾರ್ ನಮ್ಮಿಂದ ನೂರಾರು ಜನಕ್ಕೆ ಕೆಲಸ ಕೊಡಬೇಕು ಎಂದು ಹೇಳುತ್ತಿದ್ದರು. ಅವರು ಬದುಕಿದ್ದರೆ ಈ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಸ್ಟಾರ್ಟ್ ಆಗಬೇಕಿತ್ತು. ಆದರೆ ನನಗೆ ಅವರ ಜತೆ ಸಿನಿಮಾ ಮಾಡುವ ಅದೃಷ್ಟ ಸಿಗಲಿಲ್ಲ. ನಾನು ಕಂಡ ಕನಸು ಕನಸಾಗಿಯೇ ಉಳಿಯಿತು. ಆದರೆ, ಅವರಲ್ಲಿದ್ದ ಸೇವಾ ಮನೋಭಾವ ನಮಗೆ ಸ್ಪೂರ್ತಿ. ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಮಾಡಿರುವ ಸಾಮಾಜಿಕ ಸೇವೆ ನಮಗೆ ಮಾರ್ಗದರ್ಶನ ನೀಡುತ್ತದೆ' ಎಂದು ಉಮಾಪತಿ ಹೇಳಿದರು.
ಇದನ್ನೂ ಓದಿ: 'ಮದಗಜ' ಬಗ್ಗೆ ಅನುಭವ ಹಂಚಿಕೊಂಡ ರೋರಿಂಗ್ ಸ್ಟಾರ್ ಶ್ರೀಮುರಳಿ