ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಸಿಬಿಐ ಆಫೀಸರ್ ಆಗಿ ಅಭಿನಯಿಸಿರುವ ಥ್ರಿಲ್ಲರ್ ಕಥಾವಸ್ತು 'ಡಾಕ್ಟರ್ 56' ಜುಲೈ ಮೊದಲ ವಾರದಲ್ಲಿ ಸೆನ್ಸಾರ್ ಬಳಿ ಹೋಗಲಿದೆ. ಸಿನಿಮಾ ಮರ್ಡರ್ ಮಿಸ್ಟ್ರಿ ಕಥಾವಸ್ತುವನ್ನು ಒಳಗೊಂಡಿದೆ.
'ಡಾಕ್ಟರ್ 56 ' ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಏಕ ಕಾಲದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದ ನಿರ್ದೇಶಕ ರಾಜೇಶ್ ಆನಂದ್ ಲೀಲ. ನಿರ್ಮಾಪಕ ಪ್ರವೀಣ್ ರೆಡ್ಡಿ ನಾಯಕನಾಗಿ ಕೂಡಾ ನಟಿಸಿದ್ದಾರೆ. ಮದ್ದೂರು, ಆನೇಕಲ್, ಬೆಂಗಳೂರು ಹಾಗೂ ಸುತ್ತಮುತ್ತ ಲಾಕ್ಡೌನ್ಗೆ ಮುನ್ನವೇ ಚಿತ್ರೀಕರಣ ಮಾಡಲಾಗಿತ್ತು.
ಸಂಗೀತ ನಿರ್ದೇಶಕ ನೊಬಿನ್ ಪೌಲ್ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರದಲ್ಲಿ 2 ಹಾಡುಗಳು ಹಾಗೂ ಒಂದು ಸಾಹಸ ಸನ್ನಿವೇಶ ಇದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಒಂದು ವಿರಹ ಗೀತೆ ಹಾಗೂ ನಾಯಕನನ್ನು ಪರಿಚಯಿಸುವ ಹಾಡುಗಳನ್ನು ಡಾ ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.
ಪ್ರಿಯಾಮಣಿ ಅವರ ಮುಖ್ಯ ಪಾತ್ರದ ಜೊತೆಗೆ ನಾಯಕ ಆಗಿ ಪ್ರವೀಣ್ ರೆಡ್ಡಿ ನಟಿಸಿದ್ದಾರೆ. ಪ್ರವೀಣ್ ರೆಡ್ಡಿ ಅವರಿಗಿದು ಮೊದಲನೇ ನಿರ್ಮಾಣ ಹಾಗೂ ನಟನೆಯ ಸಿನಿಮಾ. ಪ್ರತಿ 5 ನಿಮಿಷಕ್ಕೆ ಥ್ರಿಲ್ಲರ್ ವಿಚಾರ ಪ್ರೇಕ್ಷಕನನ್ನು ಬೆರಗು ಗೊಳಿಸುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ದೀಪಕ್ ಶೆಟ್ಟಿ, ರಮೇಶ್ ಭಟ್, ಯತಿರಾಜ್, ಮಂಜುನಾಥ್ ಹೆಗ್ಡೆ, ಸ್ವಾತಿ ಗುರುದತ್, ವೀಣಾ ಪೊನ್ನಪ್ಪ, ಪ್ರಸಾದ್ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಎನ್. ಎಂ. ವಿಶ್ವ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.