ಪ್ರೇಮ್ ಒಂದು ವಿಷಯದಲ್ಲಂತೂ ಪಕ್ಕಾ. ಅದು ತಮ್ಮದೇ ನಿರ್ಮಾಣದ ಚಿತ್ರವಾಗಲೀ, ಬೇರೆಯವರು ನಿರ್ಮಿಸುವ ಚಿತ್ರಗಳಾಗಲೀ, ತಮಗೆ ಖುಷಿಯಾಗುವವರೆಗೂ ಅವರು ಚಿತ್ರ ಮಾಡುತ್ತಲೇ ಇರುತ್ತಾರೆ. ಇದು ಅವರ ಸ್ವಂತ ನಿರ್ಮಾಣದ `ಏಕ್ ಲವ್ ಯಾ' ಚಿತ್ರಕ್ಕೂ ಅನ್ವಯಿಸುತ್ತದೆ. ಈ ಚಿತ್ರವನ್ನು ಪ್ರೇಮ್ ಪತ್ನಿ ರಕ್ಷಿತಾ ನಿರ್ಮಿಸುತ್ತಿರುವುದರಿಂದ, ಪ್ರೇಮ್ ಬೇಗ ಚಿತ್ರೀಕರಣ ಮುಗಿಸಬಹುದು ಎಂಬ ಅಂದಾಜಿತ್ತು. ಆದರೆ, ಸದ್ಯಕ್ಕೆ ಚಿತ್ರ ಮುಗಿಯುವಂತೆ ಕಾಣುತ್ತಿಲ್ಲ.
ಲಾಕ್‍ಡೌನ್‍ಗೂ ಮುನ್ನ ಶೇ. 60ರಷ್ಟು ಚಿತ್ರೀಕರಣ ಮುಗಿಸಿದ್ದ ಪ್ರೇಮ್, ಲಾಕ್‍ಡೌನ್ ಮುಗಿದು ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾದ ಮೇಲೆ ಊಟಿಗೆ ಹೋಗಿ ಒಂದು ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡು ಬಂದಿದ್ದಾರೆ. ಹಾಗಂತ ಚಿತ್ರೀಕರಣ ಇನ್ನೂ ಸಂಪೂರ್ಣವಾಗಿಲ್ಲ. ಚಿತ್ರದ ಹಾಡುಗಳು ಬಾಕಿ ಇದ್ದು, ಆ ಹಾಡುಗಳನ್ನು ಉತ್ತರ ಭಾರತದಲ್ಲಿ ಚಿತ್ರೀಕರಿಸುವುದಕ್ಕೆ ಪ್ರೇಮ್ ಸಿದ್ಧತೆ ನಡೆಸಿದ್ದಾರೆ.
ಇದೀಗ ಲೊಕೇಶನ್ ಹಂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಪ್ರೇಮ್, ರಾಜಸ್ಥಾನ, ಗುಜರಾತ್, ಕಾಶ್ಮೀರ, ಲಡಾಖ್ ಮುಂತಾದ ಕಡೆ ಪ್ರವಾಸ ಮಾಡಿ, ತಮ್ಮ ಹಾಡಿನ ಮೂಡ್‍ಗೆ ಹೊಂದುವಂತಹ ಸೂಕ್ತ ಲೊಕೇಶನ್‍ಗಳ ಹುಡುಕಾಟದಲ್ಲಿದ್ದಾರೆ. ಲೊಕೇಶನ್ ನೋಡಿ ಬಂದ ನಂತರ, ಈ ತಿಂಗಳ ಕೊನೆಗೋ ಅಥವಾ ಮುಂದಿನ ತಿಂಗಳೋ ಅಲ್ಲಿಗೆ ಹೋಗಿ ಚಿತ್ರೀಕರಣ ಮಾಡಿ ಮುಗಿಸುವ ಸಾಧ್ಯತೆ ಇದೆ.
ಅಲ್ಲಿಗೆ `ಏಕ್ ಲವ್ ಯಾ' ಸದ್ಯಕ್ಕೆ ಬಿಡುಗಡೆಯಾಗುವಂತೆ ಕಾಣುತ್ತಿಲ್ಲ. ಚಿತ್ರೀಕರಣ ಮುಗಿಯುವುದೇ ಈ ವರ್ಷದ ಕೊನೆಗೆ, ನಂತರ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು, ಆ ನಂತರ ಪ್ರಚಾರ ಮಾಡಿ ಬಿಡುಗಡೆ ಮಾಡುವುದಕ್ಕೆ ಏನಿಲ್ಲ ಎಂದರೂ ಐದಾರು ತಿಂಗಳಾದರೂ ಬೇಕು.
ಬಹುಶಃ ಮುಂದಿನ ವರ್ಷ ಬೇಸಿಗೆ ರಜೆಯ ಸಮಯದಲ್ಲಿ ಪ್ರೇಮ್ ತಮ್ಮ `ಏಕ್ ಲವ್ ಯಾ ನನ್ನು ಚಿತ್ರಮಂದಿರದತ್ತ ಕರೆದುಕೊಂಡು ಬರುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಅವರ ಬಾಮೈದ ಅಭಿಷೇಕ್ ಅಲಿಯಾಸ್ ರಾಣಾ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದು, ಮಿಕ್ಕಂತೆ ರೀಷ್ಮಾ ನಾಣಯ್ಯ, `ಪ್ರಿನ್ಸ್ ದೀಪಕ್, ರಚಿತಾ ರಾಮ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.