ರವಿ ಶ್ರೀವತ್ಸ ನಿರ್ದೇಶಿಸಬೇಕಿದ್ದ 'ಎಂಆರ್' ಚಿತ್ರದಲ್ಲಿ ಆಯಿಲ್ ಕುಮಾರನ ಪಾತ್ರ ಮಾಡಬೇಕಿತ್ತು ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ.
ಚಿತ್ರದ ಮುಹೂರ್ತದಲ್ಲೂ ಅವರು ಭಾಗವಹಿಸಿದ್ದರು ಮತ್ತು ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡಿದ್ದರು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ. ಆ ಚಿತ್ರ ಮಿಸ್ ಆದರೂ, ಇದೀಗ ಮೂರು ಚಿತ್ರಗಳಲ್ಲಿ ನಟಿಸುವುದಕ್ಕೆ ಪ್ರಶಾಂತ್ ಸಂಬರಗಿಗೆ ಅವಕಾಶ ಸಿಕ್ಕಿದೆಯಂತೆ. ಅದಕ್ಕೆ ಕಾರಣ ಬಿಗ್ಬಾಸ್.
ಕಳೆದ ವಾರವಷ್ಟೇ ಲಾಕ್‌ಡೌನ್‌ನಿಂದ ಹಠಾತ್ತನೇ ನಿಲ್ಲಿಸಲ್ಪಟ್ಟ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಪ್ರಶಾಂತ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಅಲ್ಲಿ ತಮ್ಮ ಜಗಳಗಳಿಂದ ಮತ್ತು ಉಪವಾಸದಿಂದ ಸಾಕಷ್ಟು ಜನಪ್ರಿಯರೂ ಆಗಿದ್ದರು. ಈಗ ಅವರು 'ಬಿಗ್ ಬಾಸ್' ಮನೆಯಿಂದ ಹೊರಬರುತ್ತಿದ್ದಂತೆಯೇ ಅವರನ್ನು ಹಲವು ಅವಕಾಶಗಳು ಬೆನ್ನತ್ತಿ ಬರುತ್ತಿವೆ. ಈ ಪೈಕಿ, ಹಂಸಲೇಖ ನಿರ್ದೇಶನದ ಒಂದು ಚಿತ್ರದಲ್ಲಿ ಅವರಿಗೆ ನಟಿಸುವುದಕ್ಕೆ ಅವಕಾಶ ಸಿಕ್ಕಿದೆಯಂತೆ.
ಹಿರಿಯ ನಿರ್ಮಾಪಕ ಎನ್. ಕುಮಾರ್ ಸಹ ತಮ್ಮ ಮುಂದಿನ ಚಿತ್ರದಲ್ಲಿ ಪ್ರಶಾಂತ್‌ಗೆ ನಟಿಸುವುದಕ್ಕೆ ಕೇಳಿಕೊಂಡಿದ್ದಾರಂತೆ. ಇನ್ನು, ರವಿ ಶ್ರೀವತ್ಸ ನಿರ್ದೇಶನದ ಚಿತ್ರ ಇದ್ದೇ ಇದೆ. ಇದಲ್ಲದೆ ಕೆಲವು ಜಾಹೀರಾತುಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ಬಂದಿದ್ದು, ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಒಂದೊಂದೇ ಚಿತ್ರಗಳಲ್ಲಿ ನಟಿಸುವುದಾಗಿ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.