ಸಾಮಾಜಿಕ ಹೋರಾಟಗಾರ ಎಂದೇ ಕರೆಸಿಕೊಂಡಿರುವ ಪ್ರಶಾಂತ್ ಸಂಬರ್ಗಿ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ ಗಲ್ರಾನಿ ಹೆಸರು ಹೇಳುತ್ತಿದ್ದಂತೆ ಸಂಜನಾ, ಪ್ರಶಾಂತ್ ಸಂಬರ್ಗಿ ವಿರುದ್ಧ ತಿರುಗಿಬಿದ್ದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಪ್ರಶಾಂತ್ ವಿರುದ್ಧ ಕೇಸ್ ಹಾಕುತ್ತೇನೆ ಎಂದು ಸಂಜನಾ ಹೇಳಿದ್ದರು.
ಇಂದು ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಿ ಹೆಚ್ಚಿನ ವಿಚಾರಣೆಗೆಂದು ಸಂಜನಾ ಅವರನ್ನು ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ಇದರ ಬೆನ್ನಲ್ಲೇ ಪ್ರಶಾಂತ್ ಸಂಬರ್ಗಿ ಕೂಡಾ ನಾನು ಸಂಜನಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ. ಅದೂ ಕೂಡಾ 10 ಕೋಟಿ ರೂಪಾಯಿ ಪರಿಹಾರ ಕೇಳ್ತಾರಂತೆ. ನಮ್ಮ ತಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ನಮ್ಮ ಮನೆತನದ ಹೆಸರಿಗೆ ಸಂಜನಾ ಚ್ಯುತಿ ತಂದಿದ್ದಾರೆ. ಇಷ್ಟೆಲ್ಲಾ ಹಿನ್ನೆಲೆ ಇರುವ ಸಂಬರ್ಗಿ ಹೆಸರಿಗೆ ಕಳಂಕ ತಂದಿರುವ ಕಾರಣ ಸಂಜನಾ ಗಲ್ರಾನಿ ಮೇಲೆ ಕ್ರಿಮಿನಲ್ ಕೇಸ್ ಹೂಡುತ್ತಿದ್ದೇನೆ. ಇದಕ್ಕೆ 6 ಲಕ್ಷ ರೂಪಾಯಿ ಹಣ ಕಟ್ಟಬೇಕಾದ ಕಾರಣ ಸದ್ಯಕ್ಕೆ ಹಣ ಹೊಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.