ಟಾಲಿವುಡ್ ಮಿ. ಫರ್ಫೆಕ್ಟ್ ಪ್ರಭಾಸ್, ಇಟಲಿಯಲ್ಲಿ 'ರಾಧೇಶ್ಯಾಮ್' ಚಿತ್ರೀಕರಣ ಮುಗಿಸಿ ಇತ್ತೀಚೆಗೆ ಹೈದರಾಬಾದ್ಗೆ ವಾಪಸಾಗುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡ ನಂತರ ಪ್ರಭಾಸ್ ತಮ್ಮ ಮುಂದಿನ ಚಿತ್ರ 'ಆದಿಪುರುಷ್' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಈ ನಡುವೆ ಪ್ರಭಾಸ್ ಈಗಾಗಲೇ 'ಆದಿಪುರುಷ್' ಚಿತ್ರಕ್ಕಾಗಿ ತಯಾರಾಗುತ್ತಿದ್ದಾರಂತೆ. ಪ್ರಭಾಸ್ ಅವರ ಇತ್ತೀಚೆಗಿನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಮೊದಲಿಗಿಂತ ಅವರು ಬಹಳ ಸಣ್ಣ ಹಾಗೂ ಫಿಟ್ ಆಗಿ ಕಾಣುತ್ತಿದ್ದಾರೆ ಎನ್ನಲಾಗುತ್ತಿದೆ. ಓಂರೌತ್ ನಿರ್ದೇಶನದ 'ಆದಿಪುರುಷ್' ರಾಮಾಯಣದ ಕಥೆಯನ್ನು ಆಧರಿಸಿದ್ದು. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸುತ್ತಿದ್ದಾರೆ . ಕೆಲವು ದಿನಗಳ ಹಿಂದೆ ಪ್ರಭಾಸ್ ಲುಕ್ ಟೆಸ್ಟ್ನಲ್ಲಿ ಪಾಲ್ಗೊಂಡಿದ್ದರು. ಈಗ ಪರಿಣಿತರೊಂದಿಗೆ ಚರ್ಚಿಸಿ ಅವರ ಸಲಹೆ ಮೇರೆಗೆ ವರ್ಕೌಟ್ ಆರಂಭಿಸಿದ್ದಾರೆ. 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಎದುರು ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದು ಅವರೂ ಕೂಡಾ ತಮ್ಮ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ತೆಲುಗು, ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಲಿರುವ ಸಿನಿಮಾ 2022 ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.