ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಮೌನಂ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಇನ್ನು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಚೇತನ ಅಭಿಮಾನಿಯೊಬ್ಬರು ದರ್ಶನ್ ಅಭಿನಯದ 'ನಮ್ಮ ಪ್ರೀತಿಯ ರಾಮು' ಚಿತ್ರದ ಹಾಡೊಂದನ್ನು ಹಾಡಿ, ಡೈಲಾಗ್ಗಳನ್ನು ಹೇಳಿ ಎರಡು ಮನವಿ ಕೂಡಾ ಮಾಡಿದ್ದಾರೆ. ಆತ ದರ್ಶನ್ ಅವರ ಅಭಿಮಾನಿ ಕೂಡಾ ಹೌದು.
ವೀರೇಶ್ ಎಂಬ ವಿಶೇಷ ಚೇತನ ಅಭಿಮಾನಿ ದರ್ಶನ್ ಅವರನ್ನು ಉದ್ದೇಶಿಸಿ, ಬಹುತೇಕ ಚಿತ್ರಗಳಲ್ಲಿ ವಿಶೇಷ ಚೇತನರನ್ನು ಭಿಕ್ಷುಕರನ್ನಾಗಿ ತೋರಿಸುತ್ತಾರೆ. ದಯವಿಟ್ಟು ನಮ್ಮನ್ನು ಅ ರೀತಿ ಸಿನಿಮಾಗಳಲ್ಲಿ ತೋರಿಸಬೇಡಿ ಎಂದು ಮನವಿ ಮಾಡಿದರು.
ಜೊತೆಗೆ ನನ್ನಂತಹ ಎಷ್ಟೋ ವಿಶೇಷ ಚೇತನರು ಸಿನಿಮಾದಲ್ಲಿ ನಿಮ್ಮ ಧ್ವನಿಯನ್ನು ಕೇಳಿ ಅಭಿಮಾನಿಗಳಾಗಿದ್ದೇವೆ. ಸೌಂಡ್ ಮೂಲಕವೇ ನೀವು ವಿಲನ್ಗಳಿಗೆ ಹೊಡೆಯುವುದನ್ನು ಗ್ರಹಿಸುತ್ತೇವೆ. ಆದ್ದರಿಂದ ಆಡಿಯೋ ಡಿಸ್ಕ್ರಿಪ್ಸನ್ ಟೆಕ್ನಾಲಜಿಯನ್ನು ನಮ್ಮ ಕನ್ನಡ ಚಿತ್ರರಂಗಕ್ಕೂ ತರಬೇಕು ಎಂದು ಮನವಿ ಮಾಡಿದರು.
ದಚ್ಚು ಬರ್ತಡೇಗೆ ಆ ಅಭಿಮಾನಿ ಅಡ್ವಾನ್ಸ್ ವಿಶ್ ಕೂಡಾ ಮಾಡಿದರು. ತಮ್ಮ ಅಭಿಮಾನಿಯ ಮಾತನ್ನು ಆಲಿಸಿದ ದರ್ಶನ್ ವೇದಿಕೆ ಮೇಲೆ ಬಂದು ಪ್ರೀತಿಯಿಂದಲೇ ಮಾತನಾಡಿಸಿದರು. ನಾವು ಸಿನಿಮಾಗಳಲ್ಲಿ ಒಂದು ಟೇಕ್ನಲ್ಲಿ ಡೈಲಾಗ್ ಹೇಳುವುದೇ ಕಷ್ಟ ಅಂತದರಲ್ಲಿ ನೀವು ಡೈಲಾಗನ್ನು ಇಷ್ಟು ಸುಲಭವಾಗಿ ಹೇಳಿದಿರಿ ಎಂದು ಹೊಗಳಿದರು. ಅಲ್ಲದೆ ನೀವು ಮಾಡಿದ ಮನವಿಯನ್ನು ಪರಿಗಣಿಸುತ್ತೇನೆ ಎಂದು ಕೂಡಾ ಹೇಳಿದರು.