ಇಂದಿಗೆ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರು ಕಾಲವಾಗಿ ಮೂರು ವರ್ಷಗಳು. ಮೇ 31, 2017ರಂದು ಕನ್ನಡ ಚಿತ್ರ ರಂಗದ ದೊಡ್ಡಮನೆಯ ಒಡತಿಯನ್ನು ಅವರ ಪತಿ ಕನ್ನಡದ ಕಣ್ಮಣಿ ಡಾ ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.
ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಸ್ಮಾರಕ ಹೆಚ್ಚಾಗಿ ಅಭಿವೃದ್ದಿ ಆಗಿಲ್ಲ. ಸುತ್ತಲೂ ಹಸಿರು ಹಾಗೂ ಸಮಾಧಿ ಸ್ಥಳದಲ್ಲಿ ಅವರ ಚಿತ್ರವನ್ನ ಹಾಕಿಸಲಾಗಿದೆ. ಈ ಸುತ್ತ ಮುತ್ತ ಅನೇಕ ಕೆಲಸಗಳು ನಡೆಯಬೇಕಿದೆ ಎಂದು ಪುನೀತ್ ರಾಜ್ ಕುಮಾರ್ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಆದರೆ ಮೂರು ವರ್ಷದಲ್ಲಿ ಸ್ಮಾರಕ ಬಳಿ ಯಾವುದೇ ಕೆಲಸ ನಡೆದಿಲ್ಲ.
ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರು ಫಾಲ್ಕೆ ಅಕಾಡೆಮಿ ಪ್ರಶಸ್ತಿ ವಿಜೇತರು ಸಹ. ಕನ್ನಡ ಚಿತ್ರ ರಂಗದಲ್ಲಿ ಡಾ. ರಾಜ್ ಕುಮಾರ್ ಅವರ ಬೆಂಗಾವಲಾಗಿ, ಐದು ಮಕ್ಕಳ ಲಾಲನೆ, ಪಾಲನೆ, ಪೋಷಣೆ ಮಾಡಿಕೊಂಡು ಬಹಳ ಕಷ್ಟದ ದಿನಗಳಿಂದ ಚಿತ್ರ ರಂಗದಲ್ಲಿ ಸೇವೆ ಮಾಡಿದವರು. 1978 ರಿಂದ 80ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದವರು.
ಪಾರ್ವತಮ್ಮ ರಾಜ್ ಕುಮಾರ್ ಅವರು ಚಿತ್ರ ರಂಗಕ್ಕೆ ಎಷ್ಟು ಸೇವೆ ಸಲ್ಲಿಸಿದ್ದಾರೋ ಹಾಗೆ ಸಾಮಾಜಿಕ ಚಟುವಟಿಕೆಯಲ್ಲೂ ಸಹ ಅವರು ತಮ್ಮನ್ನು ತೊಡಗಿಸಿಕೊಂಡವರು. ಅವರನ್ನು ‘ಶಕ್ತಿ ದೇವತೆ’ ಅಂತಲೇ ಚಿತ್ರ ರಂಗ ಕರೆಯುವುದುಂಟು.
ಪಾರ್ವತಮ್ಮ ಅವರು ಮೈಸೂರಿನಲ್ಲಿ ‘ಶಕ್ತಿ ಧಾಮ’ ಎಂಬ ನಿರಾಶ್ರಿತರ ತಾಣವನ್ನು 1998 ರಲ್ಲಿ ಸ್ಥಾಪಿಸಿದರು. ಇದರ ಸ್ಥಾಪನೆಗೆ ಕಾರಣ ಡಾ ರಾಜ್ ಕುಮಾರ್.
1998 ರಲ್ಲಿ ಮೈಸೂರಿನಲ್ಲಿ ದಸರಾ ಉತ್ಸವದ ಸಮಯ. ಪೊಲೀಸ್ ಇಲಾಖೆ 800 ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಇಂದ ರಕ್ಷಣೆ ಮಾಡಿದರು. ಈ ವಿಚಾರ ಆಗಿನ ಡಿ ಸಿ ಪಿ. ಕೆಂಪಯ್ಯ ಅವರಿಂದ ಡಾ. ರಾಜಕುಮಾರ್ ಅವರ ಕಿವಿ ತಲುಪಿತು. ತಕ್ಷಣ ಡಾ.ರಾಜ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಇಂತಹವರಿಗೆ ನೆಲೆ ನೀಡಬೇಕು ಎಂದು ಸಂಕಲ್ಪ ಮಾಡಿದರು, ಅದೇ ಶಕ್ತಿ ಧಾಮ.
ಸುತ್ತೂರು ಮಠದ ಶ್ರೀ ದೇಶೀ ಕೇಂದ್ರ ಸ್ವಾಮೀಜಿ ಅವರು ಡಾ. ರಾಜಕುಮಾರ್ ಅವರ ಈ ಆಶಯ ಕೇಳಿ 1.5 ಎಕರೆ ಭೂಮಿ ನೀಡಿದರು. ಡಾ . ರಾಜ್ ಸಂಗೀತ ಸಂಜೆಯಿಂದ ಹಣ ಸಂಗ್ರಹಣೆ ಮಾಡಿದರು. ಮಾನಸ ಗಂಗೋತ್ರಿಯಲ್ಲಿ ಡಾ.ರಾಜ್ ಕುಮಾರ್ ಸಂಗೀತ ಸಂಜೆ ಇಂದ 45 ಲಕ್ಷ ರೂಪಾಯಿ ಬಂದದ್ದು ಆ ಜಾಗದಲ್ಲಿ ಕಟ್ಟಡ ಶುರು ಆಗಲು ಕಾರಣವಾಯಿತು.
ಶಕ್ತಿ ಧಾಮ ವೇಶ್ಯೆಯರಿಗೆ, ಅತ್ಯಾಚಾರಕ್ಕೆ ಒಳಗಾದವರಿಗೆ, ಗಂಡನಿಂದ ಕಿರುಕಳ ಪಡೆದವರಿಗೆ, ನಿರಾಶ್ರಿತ ಹೆಣ್ಣುಮಕ್ಕಳಿಗೆ ಒಂದು ನಿಲಯ. 4000 ಕ್ಕೂ ಹೆಚ್ಚು ಹೆಣ್ಣುಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿಯ ಮೂಲ ಮಂತ್ರ ‘ಸ್ವಾವಲಂಬನೆ’. ನೂರಾರು ಹೆಣ್ಣುಮಕ್ಕಳು ಇಲ್ಲಿಂದ ಆಶ್ರಯ ಪಡೆದು ಈಗ ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದಾರೆ.
ಡಾ.ಪಾರ್ವತಮ್ಮ ರಾಜ್ ಕುಮಾರ್ ಜೊತೆ ಮೂರು ಮಕ್ಕಳು ಶಿವಣ್ಣ, ರಾಘಣ್ಣ ಹಾಗೂ ಪುನೀತ್ ರಾಜಕುಮಾರ್ ಸಹ ಅವರ ದುಡಿಮೆಯಿಂದ ಈ ಶಕ್ತಿ ಧಾಮ ಬೆಳವಣಿಗೆಗೆ ಸಹಾಯ ಮಾಡಿದರು. ಪಾರ್ವತಮ್ಮ ರಾಜ್ ಕುಮಾರ್ ಅವರು ಅನೇಕ ವರ್ಷಗಳ ಕಾಲ ಪ್ರತಿ ತಿಂಗಳು ಈ ‘ಶಕ್ತಿ ಧಾಮ’ ಭೇಟಿ ಮಾಡುತ್ತಾ ಇದ್ದರು. ವರ್ಷಾನುಗಟ್ಟಲೆ ಶಕ್ತಿ ಧಾಮ ನಿರಾಶ್ರಿತರಿಗೆ ಆಹಾರ ವ್ಯವಸ್ಥೆಯನ್ನು ಪಾರ್ವತಮ್ಮ ರಾಜ್ ಕುಮಾರ್ ಮಾಡುತ್ತಾ ಇದ್ದರು.
ಕೆಲವರು ಕಾಲವಾದ ಮೇಲೂ ಸಹ ಮನಸಿನಲ್ಲಿ ಉಳಿಯುತ್ತಾರೆ ಅವರ ಉತ್ತಮ ಕೆಲಸಗಳಿಂದ. ಆ ಪಟ್ಟಿಗೆ ಡಾ.ಪಾರ್ವತಮ್ಮ ರಾಜ್ ಕುಮಾರ್ ಸಹ ಸೇರುತ್ತಾರೆ.