ಒಂಬತ್ತು ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದ 'ಮೋಹನದಾಸ' ಚಿತ್ರವು ಇದೇ ಅಕ್ಟೋಬರ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ, ಈ ಚಿತ್ರಕ್ಕೆ ಎದುರಾಗುತ್ತಿರುವ ತಾರತಮ್ಯದ ಬಗ್ಗೆ ಶೇಷಾದ್ರಿ ಬೇಸರಗೊಂಡಿದ್ದಾರೆ.
ಪ್ರಮುಖವಾಗಿ ಮಾಧ್ಯಮಗಳಲ್ಲಿ ಚಿತ್ರದ ಬಗ್ಗೆ ಹೆಚ್ಚು ಸುದ್ದಿಯಾಗದಿರುವ ಬಗ್ಗೆ ಅವರಿಗೆ ಬೇಸರವಿದೆ. ಹೆಸರು ಹೇಳದೆಯೇ 'ಕೋಟಿಗೊಬ್ಬ 3' ಮತ್ತು 'ಸಲಗ' ಚಿತ್ರದ ಕ್ಲಾಶ್ ಬಗ್ಗೆ ಮಾತನಾಡುವ ಅವರು, ಎಲ್ಲರೂ ಎರಡು ಚಿತ್ರಗಳ ಪೈಪೋಟಿಯ ಬಗ್ಗೆ ಸುದ್ದಿ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ, 'ಮೋಹನದಾಸ' ಚಿತ್ರದ ಕುರಿತು ಎಲ್ಲೂ ಒಂದು ಸಾಲಿಲ್ಲ. ಯಾಕೆ ರೀತಿ ಅವಗಣನೆ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ದಯವಿಟ್ಟು ಇಂಥದ್ದೊಂದು ಅಪರೂಪದ ಚಿತ್ರವನ್ನು ನಾಲ್ಕು ಜನರಿಗೆ ತಲುಪಿಸಿ ಎಂದಿದ್ದಾರೆ.
ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ
ಚಿತ್ರವು ಕೋವಿಡ್ನಿಂದಾಗಿ ಯಾವುದೇ ಚಿತ್ರೋತ್ಸವದಲ್ಲೂ ಭಾಗಿಯಾಗಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶಿಸುವುದಕ್ಕೆ ಅವಕಾಶವೇ ಸಿಗಲಿಲ್ಲ. ಯಾಕೆ ಸಿಗಲಿಲ್ಲ ಎಂಬುದು ಗೊತ್ತಿಲ್ಲ. ಇನ್ನು, ಕಾನ್ಸ್, ಬರ್ಲಿನ್ ಮುಂತಾದ ಚಿತ್ರೋತ್ಸವಗಳಲ್ಲಿ ಚಿತ್ರ ಪ್ರದರ್ಶಿಸುವ ಆಸೆ ಇತ್ತು. ಆದರೆ, ಕೋವಿಡ್ನಿಂದ ಅದೂ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಚಿತ್ರವನ್ನು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಇದು ಮಹಾತ್ಮ ಗಾಂಧಿ ಅವರ ಚಿತ್ರವಲ್ಲ. ಮೋಹನದಾಸ, ಮಹಾತ್ಮ ಆಗುವುದಕ್ಕೆ ಮುಂಚಿನ ಕಥೆ ಇದು. ಅವರ ಬಾಲ್ಯದ ಕುರಿತಾದ ಚಿತ್ರ ಇದು. ಮೋಹನದಾಸನ ಬಾಲ್ಯದ 7ರಿಂದ 14 ವರ್ಷಗಳ ಜೀವನದ ಕುರಿತಾದ ಚಿತ್ರ. ಈ ಏಳು ವರ್ಷಗಳು ಅವರಿಗೆ ಏನು ಕಲಿಸಿತು ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ.
ಬೋಳವಾರು ಮೊಹಮ್ಮದ್ ಕುಂಯಿ ಅವರ ಪಾಪು ಗಾಂಧಿ, ಬಾಪು ಗಾಂಧಿ ಆದ ಕಥೆ ಎಂಬ ಕಾದಂಬರಿಯನ್ನು ಈ ಚಿತ್ರ ಆಧರಿಸಿದ್ದು, ಚಿತ್ರಕಥೆಯನ್ನು ಶೇಷಾದ್ರಿ ಬರೆದಿದ್ದಾರೆ. ಗುಜರಾತ್ನ ಪೋರ್ ಬಂದರ್, ರಾಜಕೋಟ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಗಾಂಧಿ ಜಯಂತಿ ಸಂದರ್ಭದಲ್ಲೇ ಚಿತ್ರವು ಸುಮಾರು ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಗಾಂಧಿಯ ಬಾಲ್ಯದ ಪಾತ್ರವನ್ನು ಪರಂಸ್ವಾಮಿ ಮತ್ತು ಸಮರ್ಥ್ ಹೊಂಬಾಳ್ ನಿರ್ವಹಿಸಿದ್ದಾರೆ. ಮಿಕ್ಕಂತೆ ಅನಂತ್ ಮಹದೇವನ್, ಶೃತಿ, ದತ್ತಣ್ಣ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ಈ ನಿರ್ದೇಶಕನಿಗೆ ನೀನು ಸ್ಟಾರ್ ಡೈರಕ್ಟರ್ ಆಗುವೆ ಎಂದಿದ್ದರಂತೆ ಜಗ್ಗೇಶ್.. ನುಡಿದ ಭವಿಷ್ಯ ನಿಜವಾಯ್ತಾ?