ಮಾದೇಶ್ ಎಂಟರ್ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಮಿತ್ರರಕ್ಷಕ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆಗಸ್ಟ್ 15 ರ ಸ್ವಾತಂತ್ಯ್ರ ದಿನಾಚರಣೆಯಂದು ಈ ಸಿನಿಮಾ ಮೈ ಎಟಿಎಂ ಮೊಬೈಲ್ ಆ್ಯಪ್ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ.
![Om Prakash nayak direction Mitrarakshaka](https://etvbharatimages.akamaized.net/etvbharat/prod-images/mithra-rakshaka-11596503025741-91_0408email_1596503036_594.jpg)
ಚಿತ್ರವನ್ನು ಮಾಜಿ ಮಂತ್ರಿ ಬಿ.ಟಿ. ಲಲಿತಾ ನಾಯಕ್ ಪುತ್ರ ಓಂಪ್ರಕಾಶ್ ನಾಯಕ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಮೊದಲು ಆಪ್ತಮಿತ್ರ ಭಾಗ 3 ಎಂದು ಹೆಸರಿಡಲಾಗಿತ್ತು. ಆದರೆ ನಂತರ 'ಮಿತ್ರರಕ್ಷಕ' ಎಂದು ಬದಲಿಸಲಾಗಿದೆ. ದಟ್ಟ ಕಾಡಿಗೆ ಹೋಗುವ ತಂಡದಲ್ಲಿ ಒಬ್ಬರ ಕೊಲೆಯಾಗುತ್ತದೆ. ಆ ಕೊಲೆಯನ್ನು ನಾಗವಲ್ಲಿ ಮಾಡಿದ್ದಾಳೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಆ ಕೊಲೆಯ ಹಿಂದಿನ ರಹಸ್ಯವೇನು ಎಂದು ತಿಳಿಸುವುದೇ ಚಿತ್ರಕಥೆ. ಶೃಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ.
![Om Prakash nayak direction Mitrarakshaka](https://etvbharatimages.akamaized.net/etvbharat/prod-images/mithra-rakshaka-21596503025742-95_0408email_1596503036_1110.jpg)
ಚಿತ್ರಕ್ಕೆ ದೇವದಾಸ್ ಸಂಗೀತ, ಕಿರಣ್ ಛಾಯಾಗ್ರಹಣ, ನವೀನ್ ಸಹನಿರ್ದೇಶನ, ಓಂಪ್ರಕಾಶ್ ಸಂಕಲನವಿದೆ. ಚಿತ್ರದ ತಾರಾಗಣದಲ್ಲಿ ಓಂ ಪ್ರಕಾಶ್ ನಾಯಕ್, ಶ್ರೀಧರ್, ಸ್ಮೈಲ್ ಶಿವು, ಸ್ವಪ್ನ, ಕಾವ್ಯ, ಅವಿನಾಶ್ ಭಾರಧ್ವಾಜ್, ಪ್ರಸನ್ನ, ರುದ್ರೇಶ್, ಶಂಕರ್ ಬಾಬು, ಅನಿತಾ ಹೆಗ್ಗರ್, ನೆಲಮಂಗಲ ಬಾಬು ಹಾಗೂ ಇನ್ನಿತರರಿದ್ದಾರೆ.