ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಂಪನಿ' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ನಿವೇದಿತಾ ಗೌಡ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರತಿಷ್ಠಿತ ಕಂಪನಿಯಲ್ಲಿ ಅಪರೇಷನ್ ಅಸಿಸ್ಟೆಂಟ್ ಆಗಿ ವೃತ್ತಿ ಜೀವನ ಆರಂಭಿಸಿದ್ದಾರೆ.
ಮೈಸೂರಿನ ನಿವೇದಿತಾ ಗೌಡ ಅವರು ವೀಕ್ಷಕರಿಗೆ ಹತ್ತಿರವಾಗಿದ್ದು ದೊಡ್ಮನೆಯೊಳಗೆ ಕಾಲಿಟ್ಟ ನಂತರ. ಬಿಗ್ ಬಾಸ್ ಸ್ಪರ್ಧಿಯಾಗಿ ಮನೆ ಮಾತಾಗಿದ್ದ ನಿವಿ ಹಾಸ್ಯ ರಿಯಾಲಿಟಿ ಶೋ ಕಾಮಿಡಿ ಕಂಪನಿಯ ತೀರ್ಪುಗಾರರಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು.
ಗಗನಸಖಿ ಆಗಬೇಕೆಂಬ ಬಯಕೆ ಹೊತ್ತಿದ್ದ ಬಾರ್ಬಿ ಡಾಲ್, ಅದಕ್ಕಾಗಿ ತರಬೇತಿ ಸಹ ಪಡೆಯುತ್ತಿದ್ದರು. ಸದ್ಯ ಕಿರುತೆರೆಗೆ ಬಾಯ್ ಎಂದಿರುವ ನಿವಿ ಬೆಂಗಳೂರು ಏರ್‌ಪೋರ್ಟ್‌ನ ಪ್ರತಿಷ್ಠಿತ ಕಂಪನಿಯಲ್ಲಿ ಅಪರೇಷನ್ ಅಸಿಸ್ಟೆಂಟ್ ಅಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ನಿವೇದಿತಾ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಒಂದರ್ಥದಲ್ಲಿ ನಿವೇದಿತಾ ಅವರಿಗೆ ಇದು ಡಬಲ್ ಧಮಾಕಾ ಎಂದೇ ಹೇಳಬಹುದು. ವೃತ್ತಿ ಜೀವನ ಆರಂಭಿಸಿದ ಖುಷಿ ಒಂದೆಡೆಯಾದರೆ, ದೊಡ್ಮನೆಯಲ್ಲಿದ್ದಾಗ ಪರಿಚಯವಾಗಿ, ಸ್ನೇಹವಾಗಿ ನಂತರ ಪ್ರೀತಿ ಮಾಡಿದ ಹುಡುಗನನ್ನೇ ಮುಂದಿನ ತಿಂಗಳು 25 ಮತ್ತು 26ರಂದು ಮದುವೆ ಆಗಲಿದ್ದಾರೆ.