ಚಿತ್ರಮಂದಿರಗಳಲ್ಲಿ ಏಪ್ರಿಲ್ 7ರಿಂದ ಶೇ 50ರಷ್ಟು ಆಸನ ಭರ್ತಿಗೆ ಘೋಷಿಸಿರುವುದರಿಂದ, ಬಹಳಷ್ಟು ಜನರಿಗೆ ನಿರಾಸೆಯಾಗಿದೆ. ತುಂಬಿದ ಥಿಯೇಟರ್ಗಳಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸಬೇಕು ಎಂಬ ಆಸೆ ಇಟ್ಟುಕೊಂಡವರಿಗೆ ಹಿನ್ನೆಡೆಯಾಗಿದೆ. ಅದೇ ಕಾರಣಕ್ಕೆ, ಕೆಲವು ಚಿತ್ರತಂಡಗಳು ತಮ್ಮ ಚಿತ್ರಗಳನ್ನು ಪೋಸ್ಟ್ಪೋನ್ ಮಾಡಿವೆ.
ಈ ಪೈಕಿ ಪ್ರಮುಖವಾದದ್ದು 'ನಿನ್ನ ಸನಿಹಕೆ' ಚಿತ್ರತಂಡ. ಸೂರಜ್ ಮೊದಲ ಬಾರಿಗೆ ನಿರ್ದೇಶಿಸುವುದರ ಜೊತೆಗೆ ಸೋಲೋ ಹೀರೋ ಆಗಿ ಅಭಿನಯಿಸಿದ್ದ ಈ ಚಿತ್ರದ ಬಿಡುಗಡೆ ಇದೀಗ ಮುಂದಕ್ಕೆ ಹೋಗಿದೆ. ಈ ಚಿತ್ರದಲ್ಲಿ ಸೂರಜ್ಗೆ ನಾಯಕಿಯಾಗಿ ಡಾ. ರಾಜ್ ಅವರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಜೊತೆಯಾಗಿದ್ದರು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದರು. ಶೇ 50ರಷ್ಟು ಆಸನಗಳ ಭರ್ತಿಗೆ ಚಿತ್ರ ಪ್ರದರ್ಶಿಸುವುದು ಬೇಡ ಎಂದು ತೀರ್ಮಾನಿಸಿರುವ ಚಿತ್ರತಂಡವು, ಇನ್ನಷ್ಟು ದಿನಗಳ ಕಾಲ ಕಾದು, ಶೇ 100ರಷ್ಟು ಅನುಮತಿ ನೀಡಿದ ಮೇಲೆ, ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.
ಈ ಕುರಿತು ಮಾತನಾಡಿರುವ ಸೂರಜ್, 'ಎಲ್ಲ ಅಂದುಕೊಂಡಂತೆ ಆಗಿದ್ದರೆ, ಚಿತ್ರವು ಏಪ್ರಿಲ್ 16ಕ್ಕೆ ಬಿಡುಗಡೆ ಆಗಬೇಕಿತ್ತು. ಈಗಾಗಲೇ ಪ್ರಚಾರ ಸಹ ಶುರು ಮಾಡಿದ್ದೆವು. ಈಗ ಚಿತ್ರವನ್ನು ಮುಂದಕ್ಕೆ ಹಾಕಬೇಕಿದೆ. ಏಕೆಂದರೆ, ಪ್ರತಿಯೊಬ್ಬರೂ ತಮ್ಮ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣಲಿ ಎಂದು ಬಯಸುತ್ತಾರೆ. ನಾವು ಸಹ ಅದೇ ಉದ್ದೇಶಕ್ಕೆ ಚಿತ್ರ ಮಾಡಿದ್ದು, ಶೇ 50ರಷ್ಟು ಹಾಜರಾತಿ ಇರುವಾಗ ಚಿತ್ರವನ್ನು ಬಿಡುಗಡೆ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದೇವೆ. ಸ್ವಲ್ಪ ತಡವಾದರೂ ಶೇ 100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕ ನಂತರ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ' ಎನ್ನುತ್ತಾರೆ.
ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೇ 100ರಷ್ಟು ಹಾಜರಾತಿಗೆ ಯಾವಾಗ ಅನುಮತಿ ಸಿಗುತ್ತದೋ, ಈಗಲೇ ಹೇಳುವುದು ಕಷ್ಟ.