'ಜಾಗ್ವಾರ್' ಹಾಗೂ 'ಸೀತಾರಾಮ ಕಲ್ಯಾಣ' ಸಿನಿಮಾಗಳ ಬಳಿಕ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿರೋ ಚಿತ್ರ 'ರೈಡರ್'. ಚಿತ್ರದ ಶೀರ್ಷಿಕೆ ಹಾಗೂ ಅದ್ದೂರಿ ಮೇಕಿಂಗ್ ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದೆ ರೈಡರ್. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಡಬ್ಬಿಂಗ್ ಮಾಡೋದ್ರಲ್ಲಿ ಬ್ಯುಸಿಯಾಗಿದೆ.
ಆಕಾಶ್ ಆಡಿಯೋ ಸ್ಟುಡಿಯೋದಲ್ಲಿ ರೈಡರ್ ಚಿತ್ರದ ಡಬ್ಬಿಂಗ್ ಕಾರ್ಯ ಶುರುವಾಗಿದ್ದು, ಇಂದು ಯುವರಾಜ ನಿಖಿಲ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ರು. ಕ್ರೀಡಾ ಆಧಾರಿತ ಚಿತ್ರ 'ರೈಡರ್'ಗೆ 'ಒಕ ಲೈಲಾ ಕೋಸಂ' ಮತ್ತು 'ಗುಂಡೆ ಜಾರಿ ಗಲ್ಲಂಥಯ್ಯಿಂದೆ' ಖ್ಯಾತಿಯ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆ್ಯಕ್ಷನ್-ಕಟ್ ಹೇಳಿದ್ದಾರೆ.
ರೈಡರ್ ಮೂಲಕ ಕಶ್ಮೀರಾ ಪರದೇಶಿ ಎಂಬ ಯುವ ನಟಿ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಪದ ಎರಡನೇ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಅಚ್ಯುತ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ. ಆರ್. ಪೇಟೆ, ರಾಜೇಶ್ ನಟರಂಗ, ಶೋಭರಾಜ್, ನಿಹಾರಿಕ ಮತ್ತು ಅನುಶಾ ಸೇರಿದಂತೆ ಸಾಕಷ್ಟು ತಾರಾಗಣ ಈ ಚಿತ್ರದಲ್ಲಿದೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಶ್ರೀಶ ಕುಡುವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಲಹರಿ ಮ್ಯೂಸಿಕ್ ಮತ್ತು ಟಿ ಸಿರೀಸ್ ಜಂಟಿಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಮುಂದಿನ ವರ್ಷ ರೈಡರ್ ಸಿನಿಮಾ ತೆರೆಗೆ ಬರಲಿದೆ.