ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಸಮಾರಂಭವು, ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸರಳವಾಗಿ ಜರುಗಿತು. ಬೆಳಗ್ಗೆ 9.15 ರಿಂದ 9.45 ವರೆಗೆ ಶುಭ ಲಗ್ನದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ಕೇವಲ 42 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.
ಕೇತಗಾನಹಳ್ಳಿ ಮಾರ್ಗದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪಾಸು ಇದ್ದವರಿಗೆ ಮಾತ್ರ ಒಳಗಡೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಮದುವೆ ಸಮಾರಂಭಕ್ಕೆ ಮಾಧ್ಯಮಗಳಿಗೂ ಕೂಡ ನಿರ್ಬಂಧ ಹೇರಲಾಗಿತ್ತು.
ನಿಖಿಲ್-ರೇವತಿ ಮದುವೆ ಸಮಾರಂಭದಲ್ಲಿ ಮಾಜಿ ಪ್ರಧಾನಿ, ತಾತ ಹೆಚ್.ಡಿ. ದೇವೇಗೌಡರು, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ಅಮ್ಮ ಭವಾನಿ ರೇವಣ್ಣ ಭಾಗಿಯಾಗಿದ್ದರು.
ಇನ್ನು ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಮದುವೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ನಿಖಿಲ್ ಕುಟುಂಬದವರು ಹಾಗೂ ರೇವತಿ ಕುಟುಂಬದವರು ಮಾತ್ರ ಮದುವೆಗೆ ಆಗಮಿಸಿದ್ದರು. ಚಪ್ಪರ ಶಾಸ್ತ್ರ, ಅರಶಿಣ ಶಾಸ್ತ್ರ ರಾತ್ರಿಯೇ ತೋಟದ ಮನೆಯಲ್ಲಿ ಸಿಂಪಲ್ ಆಗಿ ಜರುಗಿತು.