ಚೊಚ್ಚಲ ಪ್ರಯತ್ನದಲ್ಲಿ ನಿರ್ದೇಶಕ ವಿಕಾಸ್ ಪುಷ್ಪಗಿರಿ ತಮ್ಮ ತಾಕತ್ತನ್ನು ಚೆನ್ನಾಗಿಯೇ ಪ್ರದರ್ಶನ ಮಾಡಿದ್ದಾರೆ. ಆದರೆ ಕೆಲವು ಅಸಂಬದ್ಧ ವಿಚಾರಗಳಿಗೆ ಅವರು ಅಷ್ಟು ಗಮನ ನೀಡುವ ಅವಶ್ಯಕತೆ ಇರ್ಲಿಲ್ವೇನೋ? ಚಿತ್ರ ಒಂದು ಸೈಂಟಿಫಿಕ್ ಥ್ರಿಲ್ಲರ್ ಎಂದು ನಿರ್ಧರಿಸಿದ ಮೇಲೆ ಖಳನಾಯಕನ ಕ್ರೂರತೆ, ಅದರ ಸುತ್ತ ಸುತ್ತುವ ಪೊಲೀಸ್ ಅಧಿಕಾರಿಯ ಪಾತ್ರಗಳಲ್ಲಿ ಹೊಂದಾಣಿಕೆ ಕಾಣಿಸುತ್ತಿಲ್ಲ. ನಾಯಕ ತನ್ನ ರಿವೆಂಜ್ಗಾಗಿ ಖಳನಾಯಕನನ್ನು ಹತ್ಯೆ ಮಾಡುತ್ತಾನೆ. ಆದರೆ ಖಳ ನಟನಿಗೆ ಇನ್ನಿತರ ಬರ್ಬರ ವಿಚಾರಗಳು ಬೇಕಾಗಿರಲಿಲ್ಲ.
ನಿರ್ದೇಶಕ ವಿಕಾಸ್ ಪುಷ್ಪಗಿರಿ ಇಂಟರ್ವಲ್‌ನ ನಂತರ ಚಿತ್ರಕಥೆಯನ್ನು ಬಿಗಿ ಮಾಡಿಕೊಂಡಿದ್ದಾರೆ. ನಾಯಕನ ಅಸಹಜ ಗುಣವನ್ನು ತೋರಿಸುತ್ತಾ, ಕ್ಲೈಮ್ಯಾಕ್ಸನ್ನು ಕೊನೆಯವರೆಗೂ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ‘ನ್ಯೂರಾನ್’?
ಮನುಷ್ಯನ ಮೆದುಳಿನಲ್ಲಿ ನ್ಯೂರಾನ್ ಸೆಲ್ಸ್ ವೀಕ್ ಆದಾಗ ಅದು ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರೇಮ ಕಥೆಯೊಂದಿಗೆ ಚಿತ್ರದಲ್ಲಿ ಬೆಸೆಯಲಾಗಿದೆ.
ಕಥೆಯಲ್ಲಿ ಯುವ ಹಾಗೂ ರಶ್ಮಿಕ ಪ್ರೇಮಿಗಳು. ಆದರೆ ಅವರ ಪ್ರೇಮ, ವಿವಾಹಕ್ಕೆ ತಿರುಗುವುದಕ್ಕೂ ಮುನ್ನ ಅವರಿಬ್ಬರೂ ತಮ್ಮ ವೃತ್ತಿಯಲ್ಲಿ ಕೆಲವು ದಿನಗಳ ಕಾಲ ದೂರ ಇರಬೇಕಾಗುತ್ತೆ. ಯುವ ಲಂಡನ್ ಅಲ್ಲಿ ಅಧ್ಯಯನಕ್ಕೆ ತೆರಳುತ್ತಾನೆ, ರಶ್ಮಿಕ ಮೊಬೈಲ್ ಸಿಗದೇ ಇರುವ ಸ್ಥಳದಲ್ಲಿ ವೃದ್ಧಾಶ್ರಮಕ್ಕೆ ಸೇವೆಗೆ ತೆರಳುತ್ತಾಳೆ.
28 ದಿವಸ ಆದ ಮೇಲೆ ಪ್ರೇಮಿಗಳು ಭೇಟಿ ಮಾಡಬೇಕು ಎಂದು ಮೊದಲೇ ನಿಶ್ಚಯವಾಗುತ್ತೆ. ಆದರೆ ರಶ್ಮಿಕ ಕಾಣೆಯಾಗಿದ್ದಾಳೆ. ಲಂಡನ್‌ನಿಂದ ವಾಪಸ್ಸಾದ ಯುವ ಪ್ರೇಯಸಿಯ ಹುಡುಕಾಟದಲ್ಲಿ ಯುವ ತೊಡಗುತ್ತಾನೆ, ಬಳಿಕ ಹತಾಶನಾಗುತ್ತಾನೆ. ನಶೆಗೂ ಗುರಿಯಾಗುತ್ತಾನೆ. ಈ ಸಂದರ್ಭದಲ್ಲಿ ಆತನ ಬಾಳಿನಲ್ಲಿ ಅಂಜಲಿ ಜೋಸೆಫ್, ಡಾ.ಚಾಂದಿನಿ ಆಗಮನ ಆಗುತ್ತದೆ. ಆದರೆ ಅಸಲಿಗೆ ಅದೆಲ್ಲವೂ ಅವನ ಕಪೋಲಕಲ್ಪಿತ ಸನ್ನಿವೇಶಗಳಷ್ಟೇ. ನಾಯಕ ನಿಜಕ್ಕೂ ತೀವ್ರ ಸ್ಕಿಜೋಫ್ರೇನಿಯಾ ಖಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ವಿವರಿಸಲಾಗುವುದು. ಇದರ ಜೊತೆಗೆ ಅವನ ನಶೆ ಅವನನ್ನು ದಿಕ್ಕು ತಪ್ಪಿಸುತ್ತದೆ ಕೂಡಾ. ಯುವ ಆರೋಗ್ಯ ನೋಡಿಕೊಳ್ಳುವ ಡಾ.ಅಶೋಕ್ ಒಂದು ಹಂತದಲ್ಲಿ ಕೆಲವು ಕಟು ಸತ್ಯಗಳನ್ನು ಬಹಿರಂಗ ಮಾಡುತ್ತಾರೆ.
ಯುವ ಹುಡುಕುತ್ತಿದ್ದ ರಶ್ಮಿಕ ಏನಾದಳು? ಯುವನ ಹುಡುಕಾಟದಲ್ಲಿ ಸಫಲವಾಗ್ತಾನಾ? ಅವನ ಖಾಯಿಲೆಗೆ ಮದ್ದು ಸಿಕ್ಕಿತಾ? ಇದನೆಲ್ಲ ನೀವು ಚಿತ್ರ ಮಂದಿರದಲ್ಲಿ ನೋಡಬೇಕು.
ಯುವ ಮೊದಲ ಪ್ರಯತ್ನದಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾನೆ. ಸಂಭಾಷಣೆ ಶೈಲಿಯಲ್ಲಿ ಸರಿಯಾಗಬೇಕು ಅಷ್ಟೇ. ನೇಹ ಪಾಟೀಲ್, ಸೌಂದರ್ಯ, ವೈಷ್ಣವಿ, ಶಿಲ್ಪಾ ಶೆಟ್ಟಿ ಅಭಿನಯದಲ್ಲಿ ಲವಲವಿಕೆ ಕಾಣುತ್ತದೆ. ಜೈ ಜಗದೀಶ್ ವೈದ್ಯರಾಗಿ, ಅರವಿಂದ್ ರಾವ್ ಪೊಲೀಸ್ ಆಗಿ ಮನಸ್ಸಿನಲ್ಲಿ ಉಳಿಯುತ್ತಾರೆ.
ಚಿತ್ರಕ್ಕೆ ಹಿನ್ನೆಲೆ ಸಂಗೀತ ತಕ್ಕ ಮಟ್ಟಿಗಿದೆ. ಛಾಯಾಗ್ರಹಣ ಭೇಷ್! ಅನ್ನಬಹುದು. ಸಂಕಲನದಲ್ಲಿ ಮತ್ತಷ್ಟು ಕತ್ತರಿ ಅಗತ್ಯ ಇತ್ತು.