ನೈಜ ಘಟನೆ ಆಧಾರಿತ 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾ ಚಿತ್ರೀಕರಣ ಮುಗಿದಿದೆ. ಇದೇ ವೇಳೆ ಮಾಜಿ ಬಿಗ್ ಬಾಸ್ ಸ್ಪರ್ಧಿ, ಸಂಗೀತ ನಿರ್ದೇಶಕ, ಹಾಡುಗಾರ, ರಾಜ್ಯಪ್ರಶಸ್ತಿಯನ್ನು ಕೂಡಾ ಪಡೆದಿರುವ ನವೀನ್ ಸಜ್ಜು ಅವರಿಗೆ ಈಗ ಭಾರೀ ಡಿಮ್ಯಾಂಡ್. 'ಕ್ರಿಟಿಕಲ್ ಕೀರ್ತನೆಗಳು' ಚಿತ್ರದ ಹಾಡೊಂದನ್ನು ನವೀನ್ ಹಾಡಿದ್ದಾರೆ.
![Critical keerthanegalu](https://etvbharatimages.akamaized.net/etvbharat/prod-images/critical-keerthenegalu--tabala-nani-and-apoorva1582253919442-40_2102email_1582253930_180.jpg)
ಸಾಮಾಜಿಕ ಜಾಲತಾಣದಲ್ಲಿ ನವೀನ್ ಸಜ್ಜು ಅವರ ಹಾಡುಗಳಿಗೆ ಬಹಳ ಬೇಡಿಕೆ ಇದೆ ಎನ್ನಬಹುದು. ‘ ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು‘ ಎಂಬ ಸಾಲಿನಿಂದ ಆರಂಭವಾಗುವ ಈ ಹಾಡನ್ನು ವಿಶ್ವವಿಜೇತ್ ರಚಿಸಿದ್ದಾರೆ. ವೀರ್ ಸಮರ್ಥ್ ಈ ಚಿತ್ರದ ಸಂಗೀತ ನಿರ್ದೇಶಕರು. 'ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ.
![Critical keerthanegalu](https://etvbharatimages.akamaized.net/etvbharat/prod-images/critical-keerthenegalu-3331582253919444-71_2102email_1582253930_895.jpg)
ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರವನ್ನು ನಿರ್ದೇಶಿಸಿ ಖ್ಯಾತರಾದ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶಿವಶಂಕರ್ ಹಾಗೂ ಶಿವ ಸೇನಾ ಛಾಯಾಗ್ರಹಣವಿದೆ. ಬೆಂಗಳೂರು, ಕುಂದಾಪುರ, ಮಂಡ್ಯ ಹಾಗೂ ಬೆಳಗಾವಿ ಸುತ್ತಮುತ್ತ ಚಿತ್ರೀಕರಿಸಿರುವ ಸಿನಿಮಾದಲ್ಲಿ ಮೂರು ಹಾಡುಗಳಿವೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ಐಪಿಎಲ್ ಬೆಟ್ಟಿಂಗ್ ಈ ಚಿತ್ರದ ಪ್ರಮುಖ ಕಥಾವಸ್ತು. ಅದರ ಜೊತೆಗೆ ಚಿತ್ರಕಥೆಯಲ್ಲಿ ಹಾಸ್ಯ ಕೂಡಾ ಸೇರಿಸಲಾಗಿದೆ. ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್, ಯಶ್ವಂತ್ ಶೆಟ್ಟಿ, ಧರ್ಮ, ದಿನೇಶ್ ಮಂಗಳೂರು ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.