ನಾಳೆ ಫೆಬ್ರವರಿ 14 ವ್ಯಾಲೆಂಟೈನ್ ಡೇಯಂದು ಬೆಳ್ಳಿತೆರೆ ಮೇಲೆ 11 ಕನ್ನಡ ಸಿನಿಮಾಗಳು ರಾರಾಜಿಸಲಿದೆ. ಅವುಗಳ ಸಾಲಿನಲ್ಲಿ 'ನವರತ್ನ' ವೊಂದು ಕೂಡಾ ಬೆಳ್ಳಿ ತೆರೆ ಮೇಲೆ ಪ್ರಜ್ವಲಿಸಲು ಹೊರಟಿದೆ. 'ಹುಚ್ಚುಡುಗ್ರು' ಖ್ಯಾತಿಯ ಪ್ರತಾಪ್ ರಾಜ್ ನಿರ್ದೇಶಿಸಿ ನಟಿಸಿರುವ 'ನವರತ್ನ' ಚಿತ್ರ ನಾಳೆ ರಾಜ್ಯಾದ್ಯಂತ ಸುಮಾರು100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
'ನವರತ್ನ' ಸಿನಿಮಾ ಈಗಾಗಲೇ ಟ್ರೇಲರ್ನಿಂದ ಜೋರು ಸದ್ದು ಮಾಡುತ್ತಿದೆ. ಪ್ರತಾಪ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಿ ನಾಯಕನಾಗಿ ಕೂಡಾ ನಟಿಸಿದ್ದಾರೆ. ನಾಯಕಿಯಾಗಿ ಮೋಕ್ಷ ಕುಶಾಲ್ ನಟಿಸಿದ್ದು ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ನವರತ್ನ' ಸಿನಿಮಾ ಜರ್ನಿ ಕಥೆಯನ್ನು ಹೊಂದಿದೆ. ಚಿತ್ರವನ್ನು ಶೃಂಗೇರಿಯ ಕಗ್ಗ ಬಳಿಯ ದಟ್ಟ ಕಾಡಿನಲ್ಲಿ ಚಿತ್ರೀಕರಿಸಿದ್ದು ,ಪ್ರೇಕ್ಷಕರಿಗೆ ಭಯ ಹಾಗೂ ನಗೆ ಎರಡರ ಅನುಭವವನ್ನು ನೀಡಲಿದೆ. ಇಂಡೋನೇಷ್ಯಾದಲ್ಲಿ ಎರಡು ಹಾಡುಗಳು ಮತ್ತು ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.
![Pratap raj](https://etvbharatimages.akamaized.net/etvbharat/prod-images/6059567_pratap.jpg)
ಒಂದೆಳೆ ಕಥೆಯನ್ನು ವಿಭಿನ್ನ ಆ್ಯಂಗಲ್ಗಳಲ್ಲಿ ತೋರಿಸಿರುವುದರಿಂದ ಈ ಸಿನಿಮಾ ಆರಂಭವಾಗಿ ಬಿಡುಗಡೆ ಆಗಲು 2 ವರ್ಷಗಳು ಬೇಕಾಯಿತು ಎನ್ನುತ್ತದೆ ಚಿತ್ರತಂಡ. ನಮಗೆ ಮೊದಲಿನಿಂದಲೂ ಎಲ್ಲರ ಸಹಕಾರ ದೊರೆತಿದೆ. ಈ ವಾರ 11 ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಭಯ ಕಾಡುತ್ತಿದೆ. ಆದರೆ ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರವನ್ನು ಪ್ರೇಕ್ಷಕ ಪ್ರಭುಗಳು ಖಂಡಿತ ಕೈ ಹಿಡಿಯುತ್ತಾರೆ ಎನ್ನುತ್ತಾರೆ ನಿರ್ದೇಶಕ ಪ್ರತಾಪ್. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರವೀಣ್ ಪೌಲ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ರಿಜೋ ಜಾನ್ ಹಾಗೂ ಲಕ್ಷ್ಮಿ ರಾಜ್ ಕ್ಯಾಮರಾ ವರ್ಕ್ ಇದೆ. ಚಿತ್ರವನ್ನು ಚಂದ್ರಶೇಖರ್ ಸಿ.ಪಿ. ನಿರ್ಮಿಸಿದ್ದು 'ನವರತ್ನ' ತೆರೆ ಮೇಲೆ ಪ್ರಜ್ವಲಿಸಲಿದೆಯಾ ಎಂಬುದನ್ನು ನಾಳೆವರೆಗೂ ಕಾದು ನೋಡಬೇಕು.