ಕನ್ನಡದ ಕೆಲವು ಚಿತ್ರಗಳು ಅದೆಷ್ಟೇ ಜನಮನ್ನಣೆ ಪಡೆದರೂ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅದೆಷ್ಟೇ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರೂ, ಅದನ್ನು ನೋಡುವ ಭಾಗ್ಯ ಕನ್ನಡಿಗರಿಗಿರುವುದಿಲ್ಲ. ಏಕೆಂದರೆ, ಚಿತ್ರಮಂದಿರಗಳಲ್ಲಿ ಆ ಚಿತ್ರಗಳು ಬಹುದಿನಗಳ ವರೆಗೆ ಇರುವುದಿಲ್ಲ.
ಆ ಚಿತ್ರಗಳು ಟಿವಿ ಚಾನಲ್ಳಗಲ್ಲೂ ಪ್ರಸಾರವಾಗುವುದಿಲ್ಲ. ಹಾಗಾಗಿ, ಕನ್ನಡದ ಅದೆಷ್ಟೋ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳು ನೋಡುವುದಕ್ಕೇ ಸಿಗುವುದಿಲ್ಲ.
ಆ ಸಾಲಿನಲ್ಲಿ ಸಂಚಾರಿ ವಿಜಯ್ ಅಭಿನಯದ ಮತ್ತು ಬಿ.ಎಸ್.ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರ ಸಹ ಒಂದಾಗಿದೆ. ಈ ಚಿತ್ರವು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸಂಚಾರಿ ವಿಜಯ್ ತಮ್ಮ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆದರೆ, ಆ ಚಿತ್ರವನ್ನು ಬಹಳಷ್ಟು ಜನ ನೋಡಿಲ್ಲ. ಏಕೆಂದರೆ, ಆ ಚಿತ್ರದ ಹಕ್ಕುಗಳನ್ನು ಯಾವುದೇ ಚಾನಲ್ನವರು ಇದುವರೆಗೂ ಖರೀದಿಸಿಲ್ಲ.
ನಿರ್ದೇಶಕ ಲಿಂಗದೇವರು ಹೇಳಿಕೊಂಡಿರುವಂತೆ, ಆ ಚಿತ್ರವನ್ನು ಕೆಲವು ಚಾನಲ್ಗಳಿಗೆ ತೋರಿಸುವ ಪ್ರಯತ್ನ ಮಾಡಲಾಯಿತಾದರೂ, ಸರಿಯಾಗಿ ಸ್ಪಂದಿಸಲಿಲ್ಲವಂತೆ. ಹಾಗಾಗಿ, ಚಿತ್ರದ ಹಕ್ಕುಗಳು ಇದುವರೆಗೂ ನಿರ್ಮಾಪಕ ರವಿ ಗರಣಿ ಅವರ ಹತ್ತಿರವೇ ಇದೆಯಂತೆ.
ಇದೀಗ, ‘ನಾನು ಅವನಲ್ಲ ಅವಳು’ ಸಿನಿಮಾವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸೋಮವಾರ, ಸಂಚಾರಿ ವಿಜಯ್ ಅವರ ನಿಧನದ ನಂತರ ಚಿತ್ರವನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಹಲವರು ಚಿತ್ರತಂಡಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರವನ್ನು 'ಸಿರಿ ಕನ್ನಡ' ಯೂಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅಪ್ಲೋಡ್ ಆದ ಒಂದೇ ದಿನದಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ನಿರ್ದೇಶಕ ಲಿಂಗದೇವರು, ಚಾನಲ್ಗಳಲ್ಲಿ ಪ್ರಸಾರಕ್ಕೆ ಅವಕಾಶ ಸಿಗದಿದ್ದ ಸಂದರ್ಭದಲ್ಲಿ ನಿರ್ಮಾಪಕ ರವಿ ಗರಣಿ ಚಿತ್ರವನ್ನು ಯೂಟ್ಯೂಬ್ನಲ್ಲಿ ಉಚಿತವಾಗಿ ಪ್ರದರ್ಶಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಚಿತ್ರವನ್ನು ಮಾಡಿದ್ದು ಹಣಕ್ಕಾಗಿ ಅಲ್ಲ, ಪ್ರೀತಿಗಾಗಿ. ಇಂತಹ ಸಂದರ್ಭದಲ್ಲಿ ವ್ಯವಹಾರ ಬೇಡ, ಒಂದೊಳ್ಳೆಯ ಚಿತ್ರ ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಯೂಟ್ಯೂಬ್ನಲ್ಲಿ ಎಲ್ಲರಿಗೂ ಉಚಿತವಾಗಿ ಸಿಗುವಂತೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.