ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿ, ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಅವರ ಆರೋಗ್ಯ ಮತ್ತು ಕುಟುಂಬದ ಬಗ್ಗೆ ಕೆಲ ಫೇಕ್ ಯೂಟ್ಯೂಬ್ ಚಾನೆಲ್‌ಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ಕಂಡು ಅರ್ಜುನ್ ಜನ್ಯ ಬೇಸರಗೊಂಡಿದ್ದಾರೆ. ಕೂಡಲೇ ಈ ಸುಳ್ಳು ಸುದ್ದಿಗಳ ಬಗ್ಗೆ ಅರ್ಜುನ್ ಜನ್ಯ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
"ಎಲ್ಲರಿಗೂ ನಿಮ್ಮ ಅರ್ಜುನ್ ಜನ್ಯ ಮಾಡುವ ನಮಸ್ಕಾರಗಳು. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಯೂಟ್ಯೂಬ್ ಚಾನೆಲ್‌ಗಳು ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ, ನನ್ನ ಆರೋಗ್ಯದ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುತ್ತಿವೆ. ಇದು ಸರಿ ಹೋಗಬಹುದು ಎಂದು ನಾನು ಸಮಾಧಾನವಾಗಿದ್ದೆ. ಆದರೆ ದಿನೇ ದಿನೆ ಇದು ಹೆಚ್ಚಾಗುತ್ತಿದೆ. ಜನರಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ ಈ ಕೆಲವು ಯೂಟ್ಯೂಬ್ ಚಾನೆಲ್‌ಗಳು ನೀಡಿದ ಮಾಹಿತಿಗಳು ಅಪ್ಪಟ ಸುಳ್ಳು. ನಾನು ಆರೋಗ್ಯವಾಗಿದ್ದೇನೆ. ನನಗೆ ಕೊರೊನಾ ಬಂದು ಗುಣಮುಖನಾಗಿ ವೈದ್ಯರ ಸಲಹೆಯಂತೆ ಈಗ ಮನೆಯಲ್ಲಿಯೇ ಹತ್ತು ದಿನ ಐಸೋಲೇಷನ್‌ನಲ್ಲಿದ್ದೇನೆ. ಇದರಲ್ಲಿ ಈಗಾಗಲೇ ಆರು ದಿನಗಳು ಪೂರ್ಣಗೊಂಡಿವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಹುಭಾಷಾ ನಟ ಸೋನು ಸೂದ್ಗೆ ಕೊರೊನಾ ಪಾಸಿಟಿವ್
"ಇನ್ನು ಉಳಿದ ನಾಲ್ಕೈದು ದಿನಗಳು ಕಳೆದ ನಂತರ ನನ್ನ ದೈನಂದಿನ ಕೆಲಸಗಳನ್ನು ಮುಂದುವರೆಸುತ್ತೇನೆ. ಮತ್ತೊಮ್ಮೆ ಈ ರೀತಿಯ ಹೀನ ಕಾರ್ಯಗಳನ್ನು ಮಾಡುತ್ತಿರುವ ಯೂಟ್ಯೂಬ್ ಚಾನೆಲ್‌ಗಳನ್ನು ವಿನಂತಿಸಿಕೊಳ್ಳುತ್ತಿದ್ದೇನೆ. ಇನ್ನು ಮುಂದಾದರೂ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ಇದರಿಂದ ಜನರಲ್ಲಿ ಕಳವಳ ಹಾಗೂ ಕುಟುಂಬದವರಿಗೂ ಇದರಿಂದ ಮಾನಸಿಕವಾಗಿ ನೋವು ಹಾಗೂ ತೊಂದರೆಯಾಗುತ್ತದೆ. ಈಗಾಗಲೇ ನನ್ನ ಗಮನಕ್ಕೆ ಬಂದಂತಹ ಎಲ್ಲ ಸಾಕ್ಷಿಗಳನ್ನು ಸೈಬರ್ ಪೊಲೀಸರಿಗೆ ನೀಡಿದ್ದೇನೆ. ದಯವಿಟ್ಟು ನೀವು ಮಾಡಿದ ವಿಡಿಯೋಗಳನ್ನು ಈ ಕೂಡಲೇ ತೆಗೆಯಬೇಕೆಂದು ಕೇಳಿಕೊಳ್ಳುತ್ತೇನೆ" ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.