ಡಿಸೆಂಬರ್ 6, ಕನ್ನಡ ಚಿತ್ರರಂಗದ ಅಮ್ಮ ಎಂದೇ ಕರೆಯಲಾಗುತ್ತಿದ್ದ ಪಾರ್ವತಮ್ಮ ರಾಜ್ಕುಮಾರ್ ಅವರ ಜನ್ಮದಿನ. ಡಾ. ರಾಜ್ಕುಮಾರ್ ಅವರ ಮಡದಿಯಾಗಿ, ಕನ್ನಡ ಚಿತ್ರರಂಗದ ನಿರ್ಮಾಪಕಿಯಾಗಿ ಅನೇಕ ಮಹತ್ತರ ಜವಾಬ್ದಾರಿಗಳನ್ನು ನಿರ್ವಹಿಸಿದ ಪಾರ್ವತಮ್ಮನವರು ತಮ್ಮ ಸಂಸ್ಥೆ ಮೂಲಕ ಅನೇಕ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು.
ಪಾರ್ವತಮ್ಮ ರಾಜ್ಕುಮಾರ್ ನಿಧನರಾದ ನಂತರ ಕಂಠೀರವ ಸ್ಟುಡಿಯೋ ಬಳಿ ಡಾ. ರಾಜ್ಕುಮಾರ್ ಸಮಾಧಿ ಬಳಿಯೇ ಅವರ ಸಮಾಧಿ ಕೂಡಾ ನಿರ್ಮಿಸಲಾಯ್ತು. '1978 ಆ್ಯಕ್ಟ್' ಸಿನಿಮಾ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪುನೀತ್ ರಾಜ್ಕುಮಾರ್, ''ಈ ಬಾರಿ ಅಮ್ಮನ ಹುಟ್ಟುಹಬ್ಬದಂದು ಮ್ಯೂಸಿಯಂ ನಿರ್ಮಾಣಕ್ಕೆ ಚಾಲನೆ ದೊರೆಯುವ ಸಾಧ್ಯತೆ ಇದೆ. ಇದಕ್ಕಾಗಿ ಈಗಾಗಲೇ ಅವಶ್ಯಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಇದಕ್ಕೆ ಸರ್ಕಾರದ ಅನುಮತಿ ಬೇಕಿರುವುದರಿಂದ ಸ್ವಲ್ಪ ತಡವಾಗುತ್ತಿದೆ'' ಎಂದರು.
''ಸಮಾಧಿ ಬಳಿ ಏನೇ ಕೆಲಸ ಆಗಬೇಕಿದ್ದರೂ ಅದು ಟ್ರಸ್ಟ್ ಮೂಲಕವೇ ಆಗಬೇಕಿದೆ. ಈ ಬಗ್ಗೆ ನಮಗೆ ಹಲವಾರು ಪ್ಲ್ಯಾನ್ಗಳಿವೆ. ಎಲ್ಲವನ್ನೂ ಕಾರ್ಯರೂಪಕ್ಕೆ ತರಲು ಸಮಯ ಬೇಕು'' ಎಂದು ಹೇಳಿದ ಪುನೀತ್ ರಾಜ್ಕುಮಾರ್, ಡಿಸೆಂಬರ್ ವೇಳೆಗೆ ಚಿತ್ರಮಂದಿರಗಳ ಪರಿಸ್ಥಿತಿ ಉತ್ತಮವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.