ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಿರುವ 'ಓಂ' ಚಿತ್ರ ಭಾರತೀಯ ಚಿತ್ರರಂಗದಲ್ಲಿ ಒಂದು ಹೊಸ ಮೈಲಿಗಲ್ಲು ನಿರ್ಮಿಸಿದ ಸಿನಿಮಾ. ಇಂದಿಗೆ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ತುಂಬಿವೆ.
'ಓಂ' ಚಿತ್ರದ ಛಾಯಾಗ್ರಾಹಕ ಗೌರಿಶಂಕರ್ ಸಹಾಯಕರಾಗಿ ಕೆಲಸ ಮಾಡಿದ್ದ ಛಾಯಾಗ್ರಾಹಕ, ನಿರ್ಮಾಪಕ ಅಣಜಿ ನಾಗರಾಜ್, ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ರೌಡಿಸಂ ಸೀಕ್ವೆಲ್ಗಳನ್ನು ಶೂಟ್ ಮಾಡುವಾಗ ನಮಗೆ ಬಹಳ ಗೊಂದಲ ಆಗಿತ್ತು. ಆದರೆ ಅಣ್ಣ-ತಂಗಿಯ ಸೆಂಟಿಮೆಂಟ್ ದೃಶ್ಯಗಳನ್ನು ಶೂಟ್ ಮಾಡುವಾಗ ನಮಗೆ ಈ ಸಿನಿಮಾ ದೊಡ್ಡ ಮಟ್ಟದ ಹೆಸರು ಮಾಡುತ್ತೆ ಎಂಬ ನಂಬಿಕೆ ಬಂತು ಎಂದು ಹೇಳಿದ್ದಾರೆ.
'ಓಂ' ಚಿತ್ರ ಹಲವು ವಿಶೇಷತೆಗಳ ಹೂರಣವಾಗಿತ್ತು. ಅದರಲ್ಲಿ ಗೌರಿ ಶಂಕರ್ ಅವರ ಕ್ಯಾಮರಾ ಕೆಲಸ ಕೂಡಾ ಇದೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಮೊದಲ ಬಾರಿಗೆ ಟಿಂಟ್ ಕಲರ್ ಲೆನ್ಸನ್ನು ಪ್ರಯೋಗ ಮಾಡಿ ಕ್ಯಾಮರಾ ಮ್ಯಾನ್ ಗೌರಿ ಶಂಕರ್ ಸಕ್ಸಸ್ ಕಂಡಿದ್ರು. ಅಲ್ಲದೆ ನಮಗೆ ಈಗಲೂ ಓಂ ಚಿತ್ರದ ಶೂಟಿಂಗ್ ಸನ್ನಿವೇಶಗಳು ಕಣ್ಣಿಗೆ ಕಟ್ಟಿದಂತಿದೆ ಎಂದು ಚಿತ್ರದ ಶೂಂಟಿಂಗ್ ನೆನಪುಗಳನ್ನು ಅಣಜಿ ನಾಗರಾಜ್ ಮೆಲುಕು ಹಾಕಿದರು.
'ಓಂ' ಚಿತ್ರದಲ್ಲಿ ಮೊದಲ ಬಾರಿ ಅಣ್ಣಾವ್ರ ಕಂಪನಿಯಲ್ಲಿ ದೊಡ್ಡ ಜೂಂ ಲೆನ್ಸ್ ಬಳಸಲಾಗಿತ್ತು. ಆ ಜೂಂ ಲೆನ್ಸ್ ಬಹಳ ಭಾರ ಇತ್ತು. ಚೇಸಿಂಗ್ ವೇಳೆ ಬಾಟಲ್ ಹೊಡೆಯುವ ಸನ್ನಿವೇಶ ಶೂಟ್ ಮಾಡುವಾಗ ಬಾಟಲ್ ಪೀಸ್ಗಳು ಕ್ಯಾಮರಾ ಲೆನ್ಸ್ ಕಡೆ ಬರುತ್ತಿದ್ದವು. ಆಗ ಕ್ಯಾಮರಾ ಅಸಿಸ್ಟೆಂಟ್ ಆಗಿದ್ದ ಪ್ರಕಾಶ್ ಎಂಬುವವರು ಸಾಕಷ್ಟು ಬಾರಿ ಬೈದಿದ್ದರು. ನಾವು ಸಾಕಷ್ಟು ಬಾರಿ ಉಪೇಂದ್ರ ಅವರನ್ನು ಮನಸ್ಸಲ್ಲೇ ಬೈದುಕೊಂಡಿದ್ದೆವು. ಆದರೆ ಸಿನಿಮಾದಲ್ಲಿ ಅಣ್ಣ-ತಂಗಿ ಸೆಂಟಿಮೆಂಟ್ ದೃಶ್ಯವನ್ನು ಯಶವಂತಪುರದ ಗಾರ್ಮೆಂಟ್ಸ್ನಲ್ಲಿ ಚಿತ್ರೀಕರಣ ಮಾಡಿದಾಗ ಶಾಕ್ ಆಗಿತ್ತು. ಅಲ್ಲದೆ ಈ ಚಿತ್ರ ಗ್ಯಾರಂಟಿ ದೊಡ್ಡ ಸೌಂಡ್ ಮಾಡುತ್ತೆ ಅಂತ ನಂಬಿಕೆ ಇತ್ತು. ಅದೇ ರೀತಿ 'ಓಂ' ಚಿತ್ರ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡ್ತು ಎಂದು ಅಣಜಿ ನಾಗರಾಜ್ ಹೇಳಿದ್ದಾರೆ.
ಇದರ ಜೊತೆಗೆ ನಮಗೆ ಭಯ ಕೂಡಾ ಆಗಿತ್ತು ಗ್ಯಾಂಗ್ ಸೀನ್ ಶೂಟ್ ಮಾಡುವ ವೇಳೆ ನಿಜವಾದ ರೌಡಿಗಳ ಜೊತೆಗೆ ಇಪ್ಪತ್ತು ಹುಡುಗರು ಬರ್ತಿದ್ರು. ಆದರೂ ಅವರೆಲ್ಲಾ ಶೂಟಿಂಗ್‌ಗೆ ಸಹಕಾರ ನೀಡಿದ್ದರು. ಅಲ್ಲದೆ ತನ್ವೀರ್ ತುಂಬಾ ಇನ್ವಾಲ್ ಆಗಿ ಶೂಟಿಂಗ್‌ಗೆ ಬರ್ತಿದ್ದರು. ಆ ವೇಳೆ ಇಡೀ ಟೀಂಗೆ ಬಿರ್ಯಾನಿ ಊಟ ಹಾಕಿಸಲಾಗಿತ್ತು.
ಇದರ ಜೊತೆಗೆ 'ಓಂ' ಟೆಕ್ನಿಕಲ್ ಆಗಿಯೂ ಗೆದ್ದಂತ ಚಿತ್ರ. ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಮಾಡುವಾಗ ಕಬ್ಬನ್ ಪಾರ್ಕ್ನಲ್ಲಿ ಲೈಟ್ ಬಹಳ ಡಲ್ ಇದ್ದ ಕಾರಣ, ವಾರ್ಮ್ ಟಿಂಟ್ ಟೋನ್ನಲ್ಲಿ ಕ್ಲೈಮ್ಯಾಕ್ಸ್ ಶೂಟ್ ಮಾಡಿ, ಕೂಡಲೇ ನೆಗೆಟಿವನ್ನು ಲ್ಯಾಬ್ಗೆ ಕಳಿಸಿ ಡೆವಲಪ್ ಮಾಡಿ ನೋಡಿದಾಗ ದೃಶ್ಯ ಬಹಳ ಅದ್ಭುತವಾಗಿ ಮೂಡಿಬಂದಿತ್ತು. ಇದನ್ನು ಗಮನಿಸಿ ಉಪೇಂದ್ರ ಹಾಗೂ ಗೌರಿಶಂಕರ್ ಇಬ್ಬರೂ ಮಾತನಾಡಿಕೊಂಡು ವಾರ್ಮ್ ಟಿಂಟ್ ಟೋನ್ನಲ್ಲೇ ಇಡೀ ಸಿನಿಮಾವನ್ನು ಚಿತ್ರೀಕರಿಸಿದರು. ಇದು ಭಾರತೀಯ ಚಿತ್ರರಂಗದಲ್ಲಿ ಮೊದಲ ಬಾರಿಗೆ ಮಾಡಿದ ಪ್ರಯೋಗ ಆಗಿತ್ತು. ಈ ಪ್ರಯೋಗದಲ್ಲಿ ಕ್ಯಾಮರಾ ಮ್ಯಾನ್ ಗೌರಿಶಂಕರ್ ಗೆದ್ದಿದ್ರು ಎಂದು ಅಣಜಿ ನಾಗರಾಜ್ ಹೇಳಿದರು.
ಇಷ್ಟು ಮಾತ್ರವಲ್ಲ ಇಡೀ ಚಿತ್ರವನ್ನು 88 ಸಾವಿರ ಅಡಿಗೂ ಹೆಚ್ಚು ನೆಗೆಟಿವ್ ಬಳಸಿ ಚಿತ್ರೀಕರಿಸಲಾಗಿದೆ. ಹೆಚ್ಚು ನೆಗೆಟಿವ್ ಬಳಸಿದ್ದನ್ನು ನಾನೇ ಒಂದು ಪುಸ್ತಕದಲ್ಲಿ ಬರೆದಿದ್ದೆ. ಒಟ್ಟಿನಲ್ಲಿ ಅಂತ ದೊಡ್ಡ ನಟ, ನಿರ್ದೇಶಕನ ಸಿನಿಮಾದಲ್ಲಿ ಕೆಲಸ ಮಾಡಿದ ಖುಷಿ ನನಗೆ ಈಗಲೂ ಇದೆ. ಒಂದು ವೇಳೆ 'ಓಂ' ಸೀಕ್ವೆಲ್ ಮಾಡಿದರೆ ನಾನು ಆ ಚಿತ್ರದಲ್ಲಿ ಯಾವುದೇ ಕೆಲಸ ಮಾಡಲು ರೆಡಿ ಎಂದು ಅಣಜಿ ನಾಗರಾಜ್ ಸುಮಾರು 25 ವರ್ಷಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.