ಕೆಲ ದಿನಗಳ ಹಿಂದೆ ಸಿನಿಮಾ ಹಾಗು ರಾಜಕೀಯ ಮುಗಿದ ಅಧ್ಯಾಯ ಎಂದು ಸುದ್ದಿಯಲ್ಲಿದ್ದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಈಗ ಪ್ರಧಾನ ಮಂತ್ರಿ ಮೋದಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಮ್ಯಾ, ಕೆಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಮತ್ತು ಅದನ್ನ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ ಎಂದು ಆರೋಪ ಮಾಡಿದ್ದಾರೆ.
ಕೋವಿಡ್‌ನಿಂದ ಸಂಭವಿಸುತ್ತಿರುವ ಸಾವುಗಳು ಅನಗತ್ಯ. ಇದನ್ನು ತಡೆಯಬಹುದಿತ್ತು. ಜನರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಅಜಾಗರೂಕತೆ ಮತ್ತು ದುರಹಂಕಾರವಿರುವ ಮೋದಿಯಿಂದಾಗಿ ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸರ್ಕಾರಕ್ಕೆ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ. ಅಧಿಕಾರಕ್ಕಾಗಿ ದುರಾಸೆ ಪಡುತ್ತಿರುವ ಈ ಸರ್ಕಾರಕ್ಕೆ ಯಾವುದೇ ಸಹಾನುಭೂತಿ ಇಲ್ಲ ಎಂದಿದ್ದಾರೆ.
ಇದನ್ನ ಕ್ಷಮಿಸಲು ಅಸಾಧ್ಯ. ಇಂದು ನಡೆಯುತ್ತಿರುವುದು ನನಗೆ ಆಘಾತ ತಂದಿದೆ ಮತ್ತು ಕೋಪವನ್ನುಂಟು ಮಾಡಿದೆ. ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಅಬ್ಬರ ವಿಪರೀತವಾಗಿದೆ. ಹೊಸ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೊರೊನಾ ವೈರಸ್ ಸೋಂಕಿನಿಂದ ಕೊನೆಯುಸಿರೆಳೆಯುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.