ಮನೆಯಲ್ಲಿ ಯಾರಾದರು ನಿಧನರಾದರೆ ಅವರು ದೇವರ ಬಳಿ ಹೋಗಿದ್ದಾರೆ ಎಂದು ಚಿಕ್ಕ ಮಕ್ಕಳ ಬಳಿ ಹೇಳುವುದುಂಟು. ಅಂತದ್ದೇ ವಿಚಾರ ಇಟ್ಟುಕೊಂಡು ಕೆಂಜ ಚೇತನ್ ‘ದೇವರು ಬೇಕಾಗಿದ್ದಾರೆ’ ಸಿನಿಮಾ ಕಥೆ ಬರೆದಿದ್ದಾರೆ. ಅಲ್ಲದೆ ಇದು ಅವರ ಬಾಲ್ಯದ ವಿಚಾರವಂತೆ.
ಅಂದಹಾಗೆ ದೇವರನ್ನು ಹುಡುಕಲು ಹೊರಟ ಮಾಸ್ಟರ್ ಅನೂಪ್ ನಗರದ ಸೆಂಟ್ ಲೂರ್ಡ್ಸ್ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈ ಮುದ್ದು ಹುಡುಗನಿಗೆ ಅಮೋಘ ಎಂಬ ಅಣ್ಣ ಕೂಡಾ ಇದ್ದಾನೆ. ಇಷ್ಟು ಚಿಕ್ಕ ವಯಸ್ಸಿಗೆ ಅನೂಪ್ 6 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾನೆ. ಅಲ್ಲದೆ ಡ್ರಾಮಾ ಜ್ಯೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನಲ್ಲಿ ಕೂಡಾ ಪಾಲ್ಗೊಂಡಿದ್ದಾನೆ.
ಅನೂಪ್ ತಂದೆ ಮತ್ತಿಕೆರೆ ನಿವಾಸಿ. ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ತಾಯಿ ಗೃಹಿಣಿ. ಮಗ ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಲ್ಲರೂ ಗುರುತು ಹಿಡಿಯುವಂತಹ ಸಾಧನೆ ಮಾಡಿರುವುದು ನಮಗೆ ನಿಜಕ್ಕೂ ಸಂತೋಷದ ವಿಷಯ ಎಂದು ಅನೂಪ್ ತಂದೆ-ತಾಯಿ ಖುಷಿ ವ್ಯಕ್ತಪಡಿಸಿದ್ದಾರೆ. 'ರಾಜಣ್ಣನ ಮಗ', 'ಅವತಾರ ಪುರುಷ', 'ರಾಮಧಾನ್ಯ, 'ದೇವರು ಬೇಕಾಗಿದ್ದಾರೆ' ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ನಾನು ನಟಿಸುತ್ತಿರುವ ಮತ್ತೊಂದು ಚಿತ್ರಕ್ಕೆ ಹೆಸರೇ ಇಟ್ಟಿಲ್ಲ ಎಂದು ಅನೂಪ್ ಮುದ್ದು ಮುದ್ದಾಗಿ ಹೇಳಿಕೊಳ್ಳುತ್ತಾನೆ. ಇವನಿಗೆ ಈ ವಯಸ್ಸಿಗೆ ಫೈಟಿಂಗ್ ಮಾಡುವುದು ಅಂದರೆ ಬಹಳ ಇಷ್ಟವಂತೆ.
ಆ್ಯಕ್ಟ್ ಮಾಡಲು ನನಗೆ ಶಾಲೆಯಲ್ಲಿ ಅನುಮತಿ ನೀಡಿದ್ದಾರೆ. ಅದಕ್ಕೆ ಸ್ಕೂಲ್ಗೆ ಚಕ್ಕರ್ ಹೊಡೆದು ಆ್ಯಕ್ಟಿಂಗ್ ಮಾಡುತ್ತಿದ್ದೇನೆ. ಫ್ರೆಂಡ್ಸ್ ಬಳಿ ಅಂದಿನ ದಿನಗಳ ಪಾಠವನ್ನು ಜೆರಾಕ್ಸ್ ಮಾಡಿಸಿಕೊಂಡು ಅದನ್ನು ಓದಿ ಒಳ್ಳೆ ಮಾರ್ಕ್ಸ್ ಪಡೆಯುತ್ತೇನೆ ಎಂದು ಅನೂಪ್ ಹೇಳುತ್ತಾನೆ. ‘ದೇವರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅನೂಪ್ ಜೊತೆ ಹಿರಿಯ ನಟ ಶಿವರಾಮ್ ನಟಿಸಿದ್ದಾರೆ. ಈ ಹುಡುಗನಿಂದ ನಾನು ಬಹಳ ಕಲಿತೆ ಎಂದು ಶಿವರಾಮ್ ಹೇಳಿಕೊಂಡಿದ್ದು, ಅವರ ದೊಡ್ಡತನವನ್ನು ತೋರಿಸುತ್ತದೆ.