ಒಂದು ಕಡೆ ಕೆಲವು ಚಿತ್ರತಂಡಗಳು ತಮ್ಮ ಚಿತ್ರಗಳು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಬೇಕು ಎಂದು ಪಟ್ಟು ಹಿಡಿದು ಕೂತರೆ, ಇನ್ನೂ ಕೆಲವರು ಓಟಿಟಿಯೇ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಸತ್ಯಪ್ರಕಾಶ್ ಸಹ ಇದೇ ನಿರ್ಧಾರಕ್ಕೆ ಬಂದಿದ್ದು, ತಮ್ಮ ಚಿತ್ರವನ್ನು ಅಮೆಜಾನ್ ಪ್ರೈಮ್ನಲ್ಲೇ ನೇರವಾಗಿ ಬಿಡುಗಡೆ ಮಾಡುತ್ತಿದ್ದಾರೆ.
'ರಾಮಾ ರಾಮಾ ರೇ' ಮತ್ತು 'ಒಂದಲ್ಲ ಎರಡಲ್ಲ' ಚಿತ್ರಗಳ ಖ್ಯಾತಿಯ ಸತ್ಯಪ್ರಕಾಶ್, 'ಮ್ಯಾನ್ ಆಫ್ ದಿ ಮ್ಯಾಚ್' ಎಂಬ ಚಿತ್ರವನ್ನು ನಿರ್ದೇಶಿಸಿರುವ ವಿಷಯ ಗೊತ್ತೇ ಇದೆ. ಈ ವರ್ಷದ ಮಾರ್ಚ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಿ, ಕೆಲವು ತಿಂಗಳುಗಳ ಹಿಂದೆ ಮುಗಿದಿತ್ತು. ಈಗ ಚಿತ್ರದ ಸೆನ್ಸಾರ್ ಸಹ ಮುಗಿದಿದ್ದು, ಚಿತ್ರವನ್ನು ನೇರವಾಗಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡುವುದಕ್ಕೆ ಅವರು ಚಿಂತನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಚಿತ್ರಮಂದಿರಗಳಲ್ಲಿ ಬಿಗ್ ಬಜೆಟ್ ಚಿತ್ರಗಳ ಬಿಡುಗಡೆ ವಿಷಯದಲ್ಲಿ ಪೈಪೋಟಿ ಹೆಚ್ಚಿದೆ. ಇನ್ನೊಂದು ಕಡೆ ಜನರಿಗೆ ಚಿತ್ರಮಂದಿರಗಳಿಗೆ ಬರುವುದಕ್ಕೆ ಇನ್ನೂ ಧೈರ್ಯ ಬಂದಿಲ್ಲ. ಹಾಗಾಗಿ, ನಾವು ಚಿತ್ರವನ್ನು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದು, ಸದ್ಯದಲ್ಲೇ ಬಿಡುಗಡೆಯ ದಿನಾಂಕವನ್ನು ತಿಳಿಸುತ್ತೇವೆ ಎನ್ನುತ್ತಾರೆ.
'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರವು ಸಿನಿಮಾ ಆಡಿಷನ್ ಹಿನ್ನೆಲೆಯ ಕಥೆಯಾಗಿದ್ದು, ಇಡೀ ಚಿತ್ರವನ್ನು ಕಂಠೀರವ ಸ್ಟುಡಿಯೋದಲ್ಲೇ ಚಿತ್ರೀಕರಣ ಮಾಡಲಾಗಿದೆ. ಧರ್ಮಣ್ಣ, ನಟರಾಜ್, ವೀಣಾ ಸುಂದರ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಸತ್ಯಪ್ರಕಾಶ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ: ಬ್ಲ್ಯಾಕ್ ಬಿಕಿನಿಯಲ್ಲಿ ಮೌನಿ ರಾಯ್ ಪೋಸ್: ಹಾಟ್ ಲುಕ್ಗೆ ನೆಟ್ಟಿಗರು ಫಿದಾ