ಮಾಲ್ಗುಡಿ ಡೇಸ್ ಎಂಬ ಹೆಸರು ಕೇಳಿದ ಕೂಡಲೇ ಥಟ್ ಅಂತ ನೆನಪಾಗುವುದು ಶಂಕರ್ ನಾಗ್. ಆರ್.ಕೆ.ನಾರಾಯಣ್ ಅವರ ಕಥೆಗಳನ್ನು ಆಧರಿಸಿ ಶಂಕರ್ನಾಗ್ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಯಾರು ತಾನೆ ಮರೆಯುತ್ತಾರೆ? ಹಿಂದಿಯಲ್ಲಿ ಮೂಡಿ ಬಂದಿದ್ದ ಮಾಲ್ಗುಡಿ ಡೇಸ್ ವೆಬ್ ಸಿರೀಸ್ ವೀಕ್ಷಕರ ಮನಸ್ಸು ಗೆದ್ದಿತ್ತು. ಇದೀಗ ಲಾಕ್ಡೌನ್ ಹಿನ್ನೆಲೆ ಮಾಲ್ಗುಡಿ ಡೇಸ್ ಮತ್ತೆ ಮರು ಪ್ರಸಾರ ಕಾಣಲಿದೆ.
![Malgudi Days re-broadcast](https://etvbharatimages.akamaized.net/etvbharat/prod-images/kn-bng-01-malgudidays-photo-ka10018_01052020170839_0105f_1588333119_877.jpg)
1986ರಲ್ಲಿ ಪ್ರಸಾರ ಕಂಡ ಮಾಲ್ಗುಡಿ ಡೇಸ್ ಧಾರಾವಾಹಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಮರು ಪ್ರಸಾರ ಆಗಲಿದೆ. ಅಂದಹಾಗೆ ಹಿಂದಿ ಭಾಷೆಯಲ್ಲಿ ಪ್ರಸಾರ ಕಂಡಿದ್ದ ಮಾಲ್ಗುಡಿ ಡೇಸ್ನಲ್ಲಿ ಕನ್ನಡದ ಕಲಾವಿದರು ಮಾತ್ರವಲ್ಲದೇ ತಂತ್ರಜ್ಞರು ಕೂಡಾ ಇದ್ದರು. ಆದರೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಅದು ಕನ್ನಡ ಭಾಷೆಗೆ ಡಬ್ ಆಗಿ ಪ್ರಸಾರವಾಗಿತ್ತು.
ಹಿಂದಿ ಭಾಷೆಯಲ್ಲಿ ಬಹಳ ಅದ್ಭುತವಾಗಿ ಮೂಡಿ ಬಂದಿದ್ದ ಮಾಲ್ಗುಡಿ ಡೇಸ್ ಶೂಟಿಂಗ್ ಆಗಿದ್ದು ಆಗುಂಬೆಯಲ್ಲಿ. ಬೆಂಗಳೂರು, ತುಮಕೂರು, ದೇವರಾಯನ ದುರ್ಗ ಬಳಿಯೂ ಚಿತ್ರೀಕರಣ ನಡೆದಿದೆ. ಪಕ್ಕಾ ಹಳ್ಳಿಯ ಪರಿಸರದ ಕಥೆಯನ್ನು ಒಳಗೊಂಡಿರುವ ಮಾಲ್ಗುಡಿ ಡೇಸ್ನಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಮಾಸ್ಟರ್ ಮಂಜುನಾಥ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ಮಾಸ್ಟರ್ ಮಂಜುನಾಥ್ ಜೊತೆಗೆ ವೈಶಾಲಿ ಕಾಸರವಳ್ಳಿ, ಬಿ.ಜಯಶ್ರೀ, ಅನಂತ್ ನಾಗ್, ರಾಜೇಶ್ ನಟರಂಗ, ಗಿರೀಶ್ ಕಾರ್ನಾಡ್, ವಿಷ್ಣುವರ್ಧನ್, ರಮೇಶ್ ಭಟ್, ಅರುಂಧತಿ ನಾಗ್ ಮುಂತಾದ ಜನಪ್ರಿಯ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸಿದ್ದರು.
ಮಾಲ್ಗುಡಿ ಡೇಸ್ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಆಗುವುದು ಲಾಕ್ಡೌನ್ ಸಮಯದಲ್ಲಿ ವೀಕ್ಷಕರಿಗೆ ಮನರಂಜನೆಯ ಮಹಾಪೂರ ಸಿಕ್ಕಂತಾಗಲಿದೆ.